- Kannada News Photo gallery Cricket photos Virat Kohli won an IPL match in Green Jersey, RCB reached IPL finals
IPL 2023: ಈ ಸಲ ಪಕ್ಕಾ RCB ಫೈನಲ್ ಆಡಲಿದೆಯಂತೆ..!
IPL 2023 Kannada: RCB ತಂಡಕ್ಕೆ ಗ್ರೀನ್ ಜೆರ್ಸಿ ಅನ್ಲಕ್ಕಿ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ 12 ಬಾರಿ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿದು ಗೆದ್ದಿರುವುದು ಕೇವಲ ನಾಲ್ಕು ಬಾರಿ ಮಾತ್ರ.
Updated on: Apr 24, 2023 | 11:52 PM

IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವು ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಆರ್ಸಿಬಿ ಅಭಿಮಾನಿಗಳ ಹೊಸ ಲೆಕ್ಕಾಚಾರ ಶುರುವಾಗಿದೆ. ಅದು ಅಂತಿಂಥ ಲೆಕ್ಕಾಚಾರವಲ್ಲ. ಬದಲಾಗಿ ಫೈನಲ್ ಆಡುವುದು ಖಚಿತ ಎಂಬ ಆತ್ಮವಿಶ್ವಾಸದ ಲೆಕ್ಕಾಚಾರ.

ಹೌದು, ಆರ್ಸಿಬಿ ತಂಡಕ್ಕೆ ಗ್ರೀನ್ ಜೆರ್ಸಿ ಅನ್ಲಕ್ಕಿ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ 12 ಬಾರಿ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿದು ಗೆದ್ದಿರುವುದು ಕೇವಲ ನಾಲ್ಕು ಬಾರಿ ಮಾತ್ರ. ಅದರಲ್ಲೂ ಮೂರು ಬಾರಿ ಗೆದ್ದಾಗಲೂ ಆರ್ಸಿಬಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ.

ಅಂದರೆ ಆರ್ಸಿಬಿ ಮೊದಲ ಬಾರಿಗೆ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದು ಗೆದ್ದಿರುವುದು 2011 ರಲ್ಲಿ. ಆ ವರ್ಷ ಆರ್ಸಿಬಿ ತಂಡವು ಫೈನಲ್ಗೆ ಪ್ರವೇಶಿಸಿತ್ತು.

ಇನ್ನು 2ನೇ ಬಾರಿ ಗ್ರೀನ್ ಜೆರ್ಸಿಯಲ್ಲಿ ಆರ್ಸಿಬಿ ಜಯ ಸಾಧಿಸಿದ್ದು 2016 ರಲ್ಲಿ. ಆ ವರ್ಷ ಕೂಡ ಆರ್ಸಿಬಿ ತಂಡವು ಫೈನಲ್ ಪ್ರವೇಶಿಸಿ ಗೆಲುವಿನ ಸಮೀಪದಲ್ಲಿ ಎಡವಿತು.

ಇದಾದ ಬಳಿಕ 2022 ರಲ್ಲಿ ಗ್ರೀನ್ ಜೆರ್ಸಿಯಲ್ಲಿ ಗೆದ್ದಿದ್ದ ಆರ್ಸಿಬಿ ಪ್ಲೇಆಫ್ ಪ್ರವೇಶಿಸಿದರೂ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿತ್ತು.

ಇದೀಗ 4ನೇ ಬಾರಿಗೆ ಆರ್ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಈ ಬಾರಿ ಕೂಡ ಆರ್ಸಿಬಿ ಫೈನಲ್ ಪ್ರವೇಶಿಸುವುದು ಖಚಿತ ಎನ್ನುತ್ತಿದ್ದಾರೆ ಅಭಿಮಾನಿಗಳು.

ಇದಕ್ಕೆ ಮುಖ್ಯ ಕಾರಣ ಕಳೆದ ಎರಡು ಬಾರಿ ಗ್ರೀನ್ ಜೆರ್ಸಿಯಲ್ಲಿ ಆರ್ಸಿಬಿ ಗೆದ್ದಾಗ ಫೈನಲ್ ಪ್ರವೇಶಿಸಿರುವುದು. ಇನ್ನು ಕಿಂಗ್ ಕೊಹ್ಲಿಯ ನಾಯಕತ್ವದಲ್ಲಿ 2016 ರಲ್ಲಿ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಜಯ ಸಾಧಿಸಿದಾಗ ಎಸ್ಆರ್ಹೆಚ್ ವಿರುದ್ಧ ಫೈನಲ್ ಆಡಿತ್ತು.

ಈ ಬಾರಿ ಕೂಡ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಆರ್ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದು ಜಯ ಸಾಧಿಸಿದೆ. ಇದೇ ಕಾರಣದಿಂದಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಪ್ರವೇಶಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಆರ್ಸಿಬಿ ಅಭಿಮಾನಿಗಳು.
