Updated on: May 07, 2023 | 3:57 PM
IPL 2023: ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಜಯದೊಂದಿಗೆ ಶುರುಭಾರಂಭ ಮಾಡಿದ ಆರ್ಸಿಬಿ ಇದೀಗ 10 ಪಂದ್ಯಗಳನ್ನು ಮುಗಿಸಿದೆ. ಆದರೆ ಇದರಲ್ಲಿ ಆರ್ಸಿಬಿ ಗೆದ್ದಿರುವುದು ಕೇವಲ 5 ಪಂದ್ಯಗಳನ್ನು ಮಾತ್ರ. ಅಂದರೆ 5 ಪಂದ್ಯಗಳಲ್ಲಿ ಸೋಲನುಭವಿಸಿರುವ ಫಾಫ್ ಡುಪ್ಲೆಸಿಸ್ ಪಡೆ ಇದೀಗ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಆದರೆ ಆರ್ಸಿಬಿ ಪಾಲಿಗೆ ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಬಹುದು. ಅಂದರೆ ಇಲ್ಲಿ 18 ಪಾಯಿಂಟ್ಸ್ಗಳಿಸಿದರೆ ಪ್ಲೇಆಫ್ ಆಡುವುದು ಕನ್ಫರ್ಮ್ ಆಗಲಿದೆ.
ಇದೀಗ 10 ಪಾಯಿಂಟ್ಸ್ ಕಲೆಹಾಕಿರುವ ಆರ್ಸಿಬಿಗೆ 8 ಅಂಕಗಳ ಅಗತ್ಯತೆಯಿದೆ. ಆದರೆ ಈ 8 ಅಂಕಗಳನ್ನು ಪಡೆಯಲು ಆರ್ಸಿಬಿ 4 ತಂಡಗಳ ವಿರುದ್ಧ ಸೆಣಸಲಿದೆ. ಅದರಲ್ಲಿ ಮೂರು ಪಂದ್ಯಗಳು ಎದುರಾಳಿಗಳ ತವರಿನಲ್ಲಿ ಎಂಬುದು ವಿಶೇಷ.
ಅಂದರೆ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಮೇ.9 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಇದಾದ ಬಳಿಕ ಮೇ 14 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯವು ಇಂದೋರ್ನಲ್ಲಿ ನಡೆಯಲಿದೆ.
ಹಾಗೆಯೇ ಮೇ 18 ರಂದು ಹೈದರಾಬಾದ್ನಲ್ಲಿ ಎಸ್ಆರ್ಹೆಚ್ ವಿರುದ್ಧ ಆಡಬೇಕಿದೆ. ಇನ್ನು ಮೇ 21 ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್.
ಈ 4 ಸವಾಲುಗಳನ್ನು ಮೆಟ್ಟಿ ನಿಂತು ಗೆದ್ದರೆ ಆರ್ಸಿಬಿ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಒಂದು ವೇಳೆ ಇದರಲ್ಲಿ ಮೂರಲ್ಲಿ ಗೆದ್ದರೆ ಉಳಿದ ತಂಡಗಳ ನೆಟ್ ರನ್ ರೇಟ್ ಅನ್ನು ಅವಲಂಭಿಸಬೇಕಾಗಿ ಬರಬಹುದು.
ಏಕೆಂದರೆ 10 ತಂಡಗಳ ಮುಕ್ತಾಯದ ಬಳಿಕ ಬಹುತೇಕ ತಂಡಗಳು 10 ಅಂಕಗಳನ್ನು ಕಲೆಹಾಕಿದ್ದು, ಹೀಗಾಗಿ ಪ್ಲೇಆಫ್ ಪ್ರವೇಶಿಸಲು 7 ತಂಡಗಳ ನಡುವೆ ನೇರ ಪೈಪೋಟಿ ಇದೆ. ಇತ್ತ ಮೈನಸ್ ನೆಟ್ ರನ್ ರೇಟ್ (-0.209) ಹೊಂದಿರುವ ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲಸ್ ನೆಟ್ ರನ್ ರೇಟ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ.
ಸದ್ಯ 5 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ತಂಡವು ಮುಂದಿನ 4 ಪಂದ್ಯಗಳನ್ನು ಗೆದ್ದರೆ 18 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸುವುದು ಖಚಿತ. ಒಂದು ವೇಳೆ ಇದರಲ್ಲಿ 1 ಪಂದ್ಯದಲ್ಲಿ ಸೋತರೂ ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲು ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗಿ ಬರಬಹುದು. ಹೀಗಾಗಿ ಆರ್ಸಿಬಿ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ಡೈರೆಕ್ಟ್ ಎಂಟ್ರಿ ಕೊಡಲಿದೆಯಾ ಕಾದು ನೋಡಬೇಕಿದೆ.