
IPL 2023: ಐಪಿಎಲ್ ಸೀಸನ್ 16 ಮುಕ್ತಾಯಗೊಂಡಿದೆ. ಈ ಬಾರಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಈ ಸಲ ಕಪ್ ನಮ್ದೆ ಎನ್ನುವ ವಿಶ್ವಾಸದಲ್ಲಿದ್ದ ಆರ್ಸಿಬಿ ಅಭಿಮಾನಿಗಳಿಗೆ ಈ ಸಲ ಕೂಡ ನಿರಾಸೆಯಾಗಿದೆ.

ಅದರಲ್ಲೂ ಲೀಗ್ ಹಂತದಲ್ಲೇ ಆರ್ಸಿಬಿ ಹೊರಬಿದ್ದಿದ್ದು ಅಭಿಮಾನಿಗಳ ಪಾಲಿಗೆ ನೋವುಂಟು ಮಾಡಿತ್ತು. ಏಕೆಂದರೆ ಕಳೆದ 3 ಸೀಸನ್ಗಳಲ್ಲಿ ಆರ್ಸಿಬಿ ಸತತ ಪ್ಲೇಆಫ್ಸ್ ಪ್ರವೇಶಿಸಿತ್ತು. ಆದರೆ ಈ ಬಾರಿ 14 ಪಂದ್ಯಗಳಲ್ಲಿ ಕೇವಲ 7 ರಲ್ಲಿ ಮಾತ್ರ ಜಯ ಸಾಧಿಸಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ.

ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಮೂರು ವರ್ಷ ಪ್ಲೇಆಫ್ಸ್ ಪ್ರವೇಶಿಸಿದ್ದ ವೇಳೆ ಆರ್ಸಿಬಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನಾಡಿರಲಿಲ್ಲ ಎಂಬುದು. ಅಂದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ 2020, 2021 ಹಾಗೂ 2022 ರ ಐಪಿಎಲ್ ಅನ್ನು ಯುಎಇ ಹಾಗೂ ಮುಂಬೈನಲ್ಲಿ ಆಯೋಜಿಸಲಾಗಿತ್ತು.

ಈ ಮೂರು ಸೀಸನ್ನಲ್ಲೂ ಆರ್ಸಿಬಿ ಪ್ಲೇಆಫ್ಸ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ಸ್ ಆಡಿದ್ದು 2016 ರಲ್ಲಿ. ಅಂದರೆ 2017,2018 ಹಾಗೂ 2019 ರಲ್ಲೂ ಆರ್ಸಿಬಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು.

ಅದರಲ್ಲೂ ಸೌತ್ ಆಫ್ರಿಕಾ (2009) ಹಾಗೂ ಇತರೆ ಕಡೆ ನಡೆದ ಐಪಿಎಲ್ (2020, 2021, 2022) ನಡೆದ ಐಪಿಎಲ್ ಅನ್ನು ಹೊರತುಪಡಿಸಿದರೆ ಉಳಿದ 12 ಸೀಸನ್ಗಳಲ್ಲಿ ಆರ್ಸಿಬಿ ಚಿನ್ನಸ್ವಾಮಿ ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನಾಡಿದೆ. ಈ ವೇಳೆ ಪ್ಲೇಆಫ್ಸ್ ಪ್ರವೇಶಿಸಿದ್ದು ಕೇವಲ 4 ಬಾರಿ ಮಾತ್ರ ಎಂದರೆ ನಂಬಲೇಬೇಕು. ಅತ್ತ ಇತರೆ ಕಡೆ ಆಡಿದ 4 ಸೀಸನ್ಗಳಲ್ಲೂ ಆರ್ಸಿಬಿ ಪ್ಲೇಆಫ್ಸ್ ಆಡಿದೆ.

ಈ ಎಲ್ಲಾ ಕಾರಣಗಳಿಂದ ಆರ್ಸಿಬಿ ಪಾಲಿಗೆ ತವರು ಮೈದಾನ ಮಗ್ಗುಲ ಮುಳ್ಳಾಗಿ ಕಾಡುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇತ್ತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡದ ಅಂಕಿ ಅಂಶಗಳು ಕೂಡ ಇದನ್ನೇ ಪುಷ್ಠೀಕರಿಸುತ್ತಿದೆ.

ಏಕೆಂದರೆ ಆರ್ಸಿಬಿ ತಂಡವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೆ 84 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 39 ಪಂದ್ಯಗಳಲ್ಲಿ ಮಾತ್ರ. ಇನ್ನು 40 ಪಂದ್ಯಗಳಲ್ಲಿ ಸೋಲನುಭವಿಸಿದೆ. ಹಾಗೆಯೇ 1 ಪಂದ್ಯ ಟೈ ಆದರೆ, 4 ಪಂದ್ಯಗಳು ರದ್ದಾಗಿತ್ತು. ಅಂದರೆ ತವರು ಮೈದಾನದಲ್ಲಿ ಆರ್ಸಿಬಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು.

ಈ ಬಾರಿ RCB 7 ಪಂದ್ಯಗಳಲ್ಲಿ ಸೋತಿದೆ. ಅದರಲ್ಲಿ ನಾಲ್ಕು ಪಂದ್ಯಗಳನ್ನು ಸೋತಿರುವುದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಆರ್ಸಿಬಿ ತಂಡದ ತವರು ಮೈದಾನದಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ಟಾಸ್ ಗೆದ್ದರೆ ಅರ್ಧ ಮ್ಯಾಚ್ ಗೆದ್ದಂತೆ.

ಇದಕ್ಕೆ ತಾಜಾ ಉದಾಹರಣೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ-ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ. ಆರ್ಸಿಬಿ ಪಾಲಿಗೆ ಪ್ಲೇಆಫ್ಸ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದರು. ಇದಾಗ್ಯೂ ವಿರಾಟ್ ಕೊಹ್ಲಿಯ ಶತಕದೊಂದಿಗೆ ಆರ್ಸಿಬಿ 197 ರನ್ ಕಲೆಹಾಕಿತ್ತು. ಆದರೆ ಗುಜರಾತ್ ಟೈಟಾನ್ಸ್ ತಂಡವು 19.1 ಓವರ್ಗಳಲ್ಲಿ ಚೇಸ್ ಮಾಡಿ ಭರ್ಜರಿ ಗೆಲುವು ದಾಖಲಿಸಿತು.

ಒಟ್ಟಿನಲ್ಲಿ ಎಲ್ಲಾ ತಂಡಗಳಿಗೆ ತವರು ಮೈದಾನ ವರದಾನವಾದರೆ ಆರ್ಸಿಬಿ ಪಾಲಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸುತ್ತಿದೆ. ಇದಕ್ಕೆ ಸಾಕ್ಷಿಯೇ ಆರ್ಸಿಬಿ ತವರು ಮೈದಾನದಲ್ಲಿ ಪಂದ್ಯಗಳನ್ನಾಡಿದಾಗ ಪ್ಲೇಆಫ್ಸ್ ಪ್ರವೇಶಿಸದಿರುವುದು.