Updated on: May 31, 2023 | 10:57 PM
IPL 2023: ಈ ಬಾರಿಯ ಐಪಿಎಲ್ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಪ್ರಮುಖ ದಾಖಲೆಗಳೆಂದರೆ ಅತೀ ಹೆಚ್ಚು ರನ್. ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಹಿಂದೆಂದೂ ಕಂಡರಿಯದಂತೆ ರನ್ ಸುರಿಮಳೆಯಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಒಟ್ಟು 1124 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಇದು ಹಿಂದೆಂದಿಗಿಂತಲೂ ಹೆಚ್ಚು. ಅಂದರೆ ಐಪಿಎಲ್ 2022 ರಲ್ಲಿ 1062 ಸಿಕ್ಸ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇನ್ನು 74 ಪಂದ್ಯಗಳಲ್ಲಿ ಒಟ್ಟು 2172 ಫೋರ್ಗಳನ್ನು ಬಾರಿಸಿದ್ದಾರೆ.
ಸಿಕ್ಸ್-ಫೋರ್ಗಳಲ್ಲದೆ ಈ ಬಾರಿ ಒಟ್ಟು 106 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇದಲ್ಲದೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ಸೆಂಚುರಿಗಳನ್ನು ಬಾರಿಸಿದ್ದು ವಿಶೇಷ. 2022 ರಲ್ಲಿ 8 ಶತಕಗಳನ್ನು ಬಾರಿಸಿದ್ದು ದಾಖಲೆಯಾಗಿತ್ತು. ಆದರೆ ಈ ಬಾರಿ 12 ಶತಕಗಳು ಮೂಡಿಬಂದಿವೆ.
ಹಾಗೆಯೇ ಐಪಿಎಲ್ ಸೀಸನ್ವೊಂದರಲ್ಲಿ ಅತೀ ಹೆಚ್ಚು ಶತಕ ಬಾರಿಸಿದ್ದು ಕೂಡ ಈ ಬಾರಿ ಎಂಬುದು ವಿಶೇಷ. ಐಪಿಎಲ್ 2023 ರಲ್ಲಿ ಒಟ್ಟು 153 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಕಳೆದ ಸೀಸನ್ನಲ್ಲಿ 118 ಅರ್ಧಶತಕ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಇನ್ನು ಒಟ್ಟು 74 ಪಂದ್ಯಗಳಲ್ಲಿ ಈ ಬಾರಿ 24 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಹಿಂದೆ ಅಂದರೆ 2022 ರಲ್ಲಿ ಒಟ್ಟು 23,052 ರನ್ ಗಳಿಸಿದ್ದು ಇದುವರೆಗಿನ ಶ್ರೇಷ್ಠ ದಾಖಲೆಯಾಗಿತ್ತು.
ಆದರೆ ಈ ಬಾರಿ ಬ್ಯಾಟ್ಸ್ಮನ್ಗಳ ಅಬ್ಬರದೊಂದಿಗೆ 74 ಪಂದ್ಯಗಳಿಂದ ಒಟ್ಟು 24,428 ರನ್ ಕಲೆಹಾಕಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಮೂಡಿಬಂದ ಸೀಸನ್ವೊಂದರ ಗರಿಷ್ಠ ರನ್ಗಳಿಕೆ ಎಂಬುದು ವಿಶೇಷ.