Updated on: Apr 17, 2023 | 11:15 PM
IPL 2023 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಸಿಕ್ಸ್ಗಳ ಸುರಿಮಳೆಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಸಿಎಸ್ಕೆ ಪರ ಡೆವೊನ್ ಕಾನ್ವೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಅಬ್ಬರಿಸಿದ ಕಾನ್ವೆ 45 ಎಸೆತಗಳಲ್ಲಿ 83 ರನ್ ಬಾರಿಸಿದರು. ಈ ವೇಳೆ ಡೆವೊನ್ ಬ್ಯಾಟ್ನಿಂದ ಸಿಡಿದದ್ದು ಬರೋಬ್ಬರಿ 6 ಭರ್ಜರಿ ಸಿಕ್ಸರ್ಗಳು ಹಾಗೂ 6 ಫೋರ್ಗಳು.
ಇದಾದ ಬಳಿಕ ಶಿವಂ ದುಬೆ 27 ಎಸೆತಗಳಲ್ಲಿ 5 ಸಿಕ್ಸ್, 2 ಫೋರ್ನೊಂದಿಗೆ 52 ರನ್ ಬಾರಿಸಿದರು. ಹಾಗೆಯೇ ಅಜಿಂಕ್ಯ ರಹಾನೆ ಕೂಡ 2 ಸಿಕ್ಸ್ನೊಂದಿಗೆ 37 ರನ್ ಚಚ್ಚಿದರು.
ಇನ್ನು ಮೊಯೀನ್ ಅಲಿ 2 ಸಿಕ್ಸ್ ಬಾರಿಸಿದರೆ, ರವೀಂದ್ರ ಜಡೇಜಾ ಹಾಗೂ ಅಂಬಾಟಿ ರಾಯುಡು ತಲಾ ಒಂದೊಂದು ಸಿಕ್ಸ್ ಸಿಡಿಸಿದರು. ಇದರೊಂದಿಗೆ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು.
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನಿಂಗ್ಸ್ನಲ್ಲಿ ಮೂಡಿಬಂದಿರುವುದು ಬರೋಬ್ಬರಿ 17 ಸಿಕ್ಸ್ಗಳು. ಅದರಂತೆ ಸಿಎಸ್ಕೆ ಇನಿಂಗ್ಸ್ನಲ್ಲಿ ಸಿಕ್ಸ್ಗಳ ಮೂಲಕವೇ 102 ರನ್ಗಳು ಮೂಡಿಬಂದಿತ್ತು.
ಇನ್ನು 226 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ಪರ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಅದರಲ್ಲೂ ಗ್ಲೆನ್ ಮ್ಯಾಕ್ಸ್ವೆಲ್ ಅಬ್ಬರದ ಮುಂದೆ ಸಿಎಸ್ಕೆ ಬೌಲರ್ಗಳು ಮಂಕಾದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್ಗಳ ಸುರಿಮಳೆಗೈದ ಮ್ಯಾಕ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮ್ಯಾಕ್ಸ್ವೆಲ್ ಬ್ಯಾಟ್ನಿಂದ 8 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳು ಮೂಡಿಬಂತು. ಅಲ್ಲದೆ 36 ಎಸೆತಗಳಲ್ಲಿ 76 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಮ್ಯಾಕ್ಸ್ವೆಲ್ ಔಟಾದ ಬೆನ್ನಲ್ಲೇ 33 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 62 ರನ್ ಬಾರಿಸಿದ ಫಾಫ್ ಡುಪ್ಲೆಸಿಸ್ ಕೂಡ ನಿರ್ಗಮಿಸಿದರು.
ಆ ಬಳಿಕ ಬಂದ ದಿನೇಶ್ ಕಾರ್ತಿಕ್ 1 ಸಿಕ್ಸ್ನೊಂದಿಗೆ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಹಾಗೆಯೇ ಶಹಬಾಝ್ ಅಹ್ಮದ್ ಕೂಡ 1 ಸಿಕ್ಸ್ ಬಾರಿಸಿ ನಿರ್ಗಮಿಸಿದರು.
ಕೊನೆಯ 2 ಓವರ್ಗಳಲ್ಲಿ ಆರ್ಸಿಬಿ ತಂಡಕ್ಕೆ ಗೆಲ್ಲಲು 31 ರನ್ಗಳ ಅವಶ್ಯಕತೆಯಿತ್ತು. ಈ ಹಂತದ ಸುಯಶ್ ಪ್ರಭುದೇಸಾಯಿ 1 ಸಿಕ್ಸ್ ಬಾರಿಸಿದರು. ಅಲ್ಲದೆ ಕೊನೆಯ ಓವರ್ನಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು. ಇದಾಗ್ಯೂ ಆರ್ಸಿಬಿ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಅಂತಿಮವಾಗಿ ಸಿಎಸ್ಕೆ ತಂಡವು 8 ರನ್ಗಳಿಂದ ರೋಚಕ ಜಯ ಸಾಧಿಸಿತು.
ಅಂದರೆ ಈ ಪಂದ್ಯದಲ್ಲಿ ಸಿಎಸ್ಕೆ ತಂಡವು 17 ಸಿಕ್ಸ್ಗಳನ್ನು ಬಾರಿಸಿದರೆ, ಆರ್ಸಿಬಿ ತಂಡ 16 ಸಿಕ್ಸ್ಗಳನ್ನು ಸಿಡಿಸಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲೇ ಬರೋಬ್ಬರಿ 33 ಸಿಕ್ಸ್ಗಳು ಮೂಡಿಬಂದಿದ್ದವು.