Updated on: Apr 17, 2023 | 5:07 PM
IPL 2023 RCB vs CSK: ಐಪಿಎಲ್ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಕದನದಲ್ಲಿ ಕಿಂಗ್ ಕೊಹ್ಲಿ ಮಿಂಚಿದರೆ ಮತ್ತೆರಡು ದಾಖಲೆಗಳು ಅವರ ಪಾಲಾಗಲಿದೆ.
ಅಂದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 21 ರನ್ ಕಲೆಹಾಕಿದರೆ ಸಿಎಸ್ಕೆ ವಿರುದ್ಧ 1000 ರನ್ ಪೂರೈಸಿದ ಮೊದಲ ಆರ್ಸಿಬಿ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಸದ್ಯ 979 ರನ್ ಕಲೆಹಾಕಿರುವ ಕೊಹ್ಲಿಗೆ ಕೇವಲ 21 ರನ್ಗಳ ಅವಶ್ಯಕತೆಯಿದೆ.
ಹಾಗೆಯೇ ಈ ಪಂದ್ಯದಲ್ಲಿ ಮೂರು ಫೋರ್ ಬಾರಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 600 ಫೋರ್ಗಳನ್ನು ಸಿಡಿಸಿದ ವಿಶೇಷ ದಾಖಲೆಯೊಂದು ವಿರಾಟ್ ಕೊಹ್ಲಿಯ ಪಾಲಾಗಲಿದೆ.
ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯಿಂದ ಭರ್ಜರಿ ಬ್ಯಾಟಿಂಗ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಅಬ್ಬರದೊಂದಿಗೆ ಕಿಂಗ್ ಕೊಹ್ಲಿ ಮತ್ತೆರಡು ಐಪಿಎಲ್ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.
ಇನ್ನು ಐಪಿಎಲ್ನಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್ಸಿಬಿ ಗೆದ್ದಿರುವುದು ಕೇವಲ 10 ಬಾರಿ ಮಾತ್ರ. ಇನ್ನು ಒಂದು ಪಂದ್ಯವು ರದ್ದಾಗಿತ್ತು.
ಹಾಗೆಯೇ 30 ಪಂದ್ಯಗಳಲ್ಲಿ 19 ಬಾರಿ ಜಯ ಸಾಧಿಸಿರುವ ಸಿಎಸ್ಕೆ ತಂಡವು ಮೇಲುಗೈ ಸಾಧಿಸಿದೆ. ಇದಾಗ್ಯೂ ಈ ಬಾರಿ ಆರ್ಸಿಬಿ ತಂಡವು ಬಲಿಷ್ಠವಾಗಿರುವ ಕಾರಣ ಭರ್ಜರಿ ಪೈಪೋಟಿಯನ್ನು ಎದುರು ನೋಡಬಹಹುದು.