
ಐಪಿಎಲ್ ಸೀಸನ್ 16 ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ರಿಟೈನ್ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಿದೆ. ಅದರಂತೆ ಬಹುತೇಕ ತಂಡಗಳು ಈ ಬಾರಿ 8 ಕ್ಕಿಂತ ಹೆಚ್ಚಿನ ಆಟಗಾರರನ್ನು ರಿಲೀಸ್ ಮಾಡಿದೆ.

ಹೀಗಾಗಿಯೇ ಐಪಿಎಲ್ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರ ಖರೀದಿಗೆ ಪೈಪೋಟಿ ಕಂಡು ಬರುವುದು ಖಚಿತ. ಆದರೆ ಅದಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಕೆಲ ಆಟಗಾರರ ಖರೀದಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದಾರೆ.

ಅದರಲ್ಲೂ ಆಸ್ಟ್ರೇಲಿಯಾದ ಯುವ ಸ್ಪೋಟಕ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಖರೀದಿಗೆ ರಿಕಿ ಪಾಂಟಿಂಗ್ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಗ್ರೀನ್ ಅವರ ಸಾಮರ್ಥ್ಯ ಹಾಗೂ ಅವರ ಲಭ್ಯತೆಯ ಬಗ್ಗೆ ಪಾಂಟಿಂಗ್ ಆಸ್ಟ್ರೇಲಿಯಾ ಕೋಚ್ ಮೆಕ್ ಡೊನಾಲ್ಡ್ ಜೊತೆ ಚರ್ಚಿಸಿದ್ದಾರೆ.

ಅಷ್ಟೇ ಅಲ್ಲದೆ ಕ್ಯಾಮರೋನ್ ಗ್ರೀನ್ ಖರೀದಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ನ್ಯಾಯಯುತ ಮೊತ್ತವನ್ನು ಮೀಸಲಿಟ್ಟಿದೆ ಎಂಬ ವಿಚಾರವನ್ನು ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ 20 ವರ್ಷ ಉದಯೋನ್ಮುಖ ಆಟಗಾರನ ಖರೀದಿಗೆ ಡೆಲ್ಲಿ ತಂಡವು ಇನ್ನಿಲ್ಲದ ಪ್ರಯತ್ನ ನಡೆಸುವುದು ಖಚಿತ.

ಇತ್ತ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಕ್ಯಾಮರೋನ್ ಗ್ರೀನ್ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬರುವ ಸಾಧ್ಯತೆಯಿದೆ. ಏಕೆಂದರೆ ಸೆಪ್ಟೆಂಬರ್ನಲ್ಲಿ ನಡೆದ ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಕ್ಯಾಮರೋನ್ ಗ್ರೀನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಅಷ್ಟೇ ಅಲ್ಲದೆ 3 ಪಂದ್ಯಗಳಲ್ಲಿ 2 ಅರ್ಧಶತಕದೊಂದಿಗೆ ಒಟ್ಟು 118 ರನ್ ಬಾರಿಸಿದ್ದರು.

ಇನ್ನು 140 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯವನ್ನೂ ಕೂಡ ಗ್ರೀನ್ ಹೊಂದಿದ್ದಾರೆ. ಹೀಗಾಗಿ ಯುವ ಆಲ್ರೌಂಡರ್ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಪೈಪೋಟಿ ನಡೆಸಲಿದೆ.

ಇತ್ತ ಕ್ಯಾಪಿಟಲ್ಸ್ ತಂಡವು ಒಟ್ಟು 19.45 ಕೋಟಿ ಹರಾಜು ಮೊತ್ತ ಹೊಂದಿದ್ದು, ಅದರಲ್ಲಿ ದೊಡ್ಡ ಮೊತ್ತವೊಂದನ್ನು ಕ್ಯಾಮರೋನ್ ಗ್ರೀನ್ ಖರೀದಿಗಾಗಿ ಮೀಸಲಿಟ್ಟಿದೆ. ಹೀಗಾಗಿ ಆಸೀಸ್ ಆಲ್ರೌಂಡರ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರೆ ಅಚ್ಚರಿ ಪಡಬೇಕಿಲ್ಲ.