Updated on: Apr 27, 2023 | 7:45 PM
IPL 2023 RCB vs KKR: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 36ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕೆಕೆಆರ್ ತಂಡವು ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಕೆಕೆಆರ್ ತಂಡಕ್ಕೆ ಆರಂಭಿಕ ಆಟಗಾರ ಜೇಸನ್ ರಾಯ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. 29 ಎಸೆತಗಳಲ್ಲಿ 56 ರನ್ ಬಾರಿಸಿ ರಾಯ್ ಉತ್ತಮ ಆರಂಭ ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕ ನಿತೀಶ್ ರಾಣಾ ಕೇವಲ 21 ಎಸೆತಗಳಲ್ಲಿ 48 ರನ್ ಬಾರಿಸಿದರು. ಪರಿಣಾಮ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೆಕೆಆರ್ 200 ರನ್ ಕಲೆಹಾಕಿತು.
201 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೆಕೆಆರ್ ತಂಡವು 21 ರನ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನ ಬಳಿಕ ಉಭಯ ತಂಡಗಳ ಆಟಗಾರರು ಕ್ರೀಡಾಸ್ಪೂರ್ತಿಯ ಸೂಚಕವಾಗಿ ಪರಸ್ಪರ ಹಸ್ತಲಾಘವ ಮಾಡಿದರು. ಇದೇ ವೇಳೆ ಕೆಕೆಆರ್ ತಂಡದ ಹೊಡಿಬಡಿ ದಾಂಡಿಗ ರಿಂಕು ಸಿಂಗ್ ವಿರಾಟ್ ಕೊಹ್ಲಿಯ ಪಾದವನ್ನು ಮುಟ್ಟಿ ನಮಸ್ಕರಿಸಿದ್ದಾರೆ ಎಂದು ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಲ್ನೋಟಕ್ಕೆ ಇದೊಂದು ಎಡಿಟೆಡ್ ಫೋಟೋದಂತೆ ತೋರುತ್ತಿದ್ದು, ಈ ಚಿತ್ರವನ್ನು ದೃಢೀಕರಿಸುವಂತೆ ಯಾವುದೇ ವಿಡಿಯೋ ಕೂಡ ಕಂಡು ಬಂದಿಲ್ಲ.
ಮತ್ತೊಂದೆಡೆ ಕೊಲ್ಕತ್ತಾದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ರಿಂಕು ಸಿಂಗ್ ಭೇಟಿಯಾಗಿದ್ದರು. ಅಲ್ಲದೆ ಈ ವೇಳೆ ಪರಸ್ಪರ ಹಸ್ತಲಾಘವ ಮಾಡುತ್ತಿರುವ ಫೋಟೋವೊಂದು ಕಾಣಸಿಗುತ್ತದೆ. ಹೀಗಾಗಿ ಮೈದಾನದಲ್ಲಿ ಕಿಂಗ್ ಕೊಹ್ಲಿಯ ಪಾದ ಮುಟ್ಟಿ ರಿಂಕು ಸಿಂಗ್ ನಮಸ್ಕರಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರ ಎಂದು ಕೂಡ ಹೇಳಬಹುದು.
ಅಂದಹಾಗೆ ರಿಂಕು ಸಿಂಗ್ ಅವರ ಅಚ್ಚು ಮೆಚ್ಚಿನ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇದೇ ಕಾರಣದಿಂದಾಗಿ ಪ್ರತಿ ಬಾರಿ ಕೆಕೆಆರ್-ಆರ್ಸಿಬಿ ನಡುವಣ ಪಂದ್ಯದ ವೇಳೆ ರಿಂಕು ತನ್ನ ನೆಚ್ಚಿನ ಆಟಗಾರನನ್ನು ಭೇಟಿಯಾಗುತ್ತಾರೆ.
Published On - 7:22 pm, Thu, 27 April 23