IPL 2023: ಇನ್ಮುಂದೆ ಇರುವುದು RCB ತಂಡದ ಅಸಲಿ ಆಟ..!
IPL 2023 Kannada: ಆರ್ಸಿಬಿ ತಂಡ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳು ನಡೆದಿರುವುದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಅಂದರೆ ಈಗಾಗಲೇ ಆರ್ಸಿಬಿ ತಂಡದ ಹೋಮ್ ಗ್ರೌಂಡ್ ಪಂದ್ಯಗಳು ಬಹುತೇಕ ಪೂರ್ಣಗೊಂಡಿದೆ.
Updated on: Apr 27, 2023 | 8:38 PM

IPL 2023: ಐಪಿಎಲ್ನ ಮೊದಲಾರ್ಧ ಪೂರ್ಣಗೊಂಡು ಇದೀಗ ದ್ವಿತಿಯಾರ್ಧ ಆರಂಭವಾಗಿದೆ. ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿದ್ದ ಆರ್ಸಿಬಿ ತಂಡವು ದ್ವಿತಿಯಾರ್ಧದ ಮೊದಲ ಪಂದ್ಯದಲ್ಲೇ ಸೋಲನುಭವಿಸಿದೆ.

ವಿಶೇಷ ಎಂದರೆ ಆರ್ಸಿಬಿ ತಂಡ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳು ನಡೆದಿರುವುದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಅಂದರೆ ಈಗಾಗಲೇ ಆರ್ಸಿಬಿ ತಂಡದ ಹೋಮ್ಗ್ರೌಂಡ್ ಪಂದ್ಯಗಳು ಬಹುತೇಕ ಪೂರ್ಣಗೊಂಡಿದೆ. ಇನ್ನು ಉಳಿದಿರುವುದು ಗುಜರಾತ್ ಟೈಟಾನ್ಸ್ ವಿರುದ್ಧದ ಏಕೈಕ ಪಂದ್ಯ ಮಾತ್ರ.

ಅಂದರೆ ಆರ್ಸಿಬಿ ತಂಡವು ಇನ್ನು ಆಡಬೇಕಿರುವುದು ಎದುರಾಳಿಗಳ ಹೋಮ್ ಗ್ರೌಂಡ್ನಲ್ಲಿ. ಅದರಂತೆ ಮುಂದಿನ 6 ಪಂದ್ಯಗಳಲ್ಲಿ 5 ಮ್ಯಾಚ್ಗಳನ್ನು ಆರ್ಸಿಬಿ ಎದುರಾಳಿಗಳ ತವರು ಪಿಚ್ನಲ್ಲಿ ಆಡಬೇಕಿದೆ.

ಇತ್ತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 6 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿರುವುದು ಕೇವಲ 3 ಪಂದ್ಯಗಳನ್ನು ಮಾತ್ರ. ಅಂದರೆ ತವರು ಮೈದಾನದ ಸಂಪೂರ್ಣ ಲಾಭ ಪಡೆಯುವಲ್ಲಿ ಆರ್ಸಿಬಿ ತಂಡ ವಿಫಲವಾಗಿದೆ ಎಂದೇ ಹೇಳಬಹುದು.

ಇದೀಗ ಆರ್ಸಿಬಿ ಎದುರಾಳಿಗಳ ತವರು ಮೈದಾನದಲ್ಲಿ 5 ಪಂದ್ಯಗಳನ್ನಾಡಬೇಕಿದೆ. ಈ ಪಂದ್ಯಗಳಲ್ಲಿ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್, ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಏಕಾನ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಬೇಕಿದೆ. ಈ 3 ಮೈದಾನಗಳಲ್ಲಿ ಅಲ್ಲಿನ ಸ್ಥಳೀಯ ತಂಡಗಳಿಗೆ ಭರಪೂರ ಬೆಂಬಲ ವ್ಯಕ್ತವಾಗಲಿದೆ.

ಇದಲ್ಲದೆ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹೈದರಾಬಾದ್ನಲ್ಲಿ ಎಸ್ಆರ್ಹೆಚ್ ತಂಡವನ್ನು ಎದುರಿಸಲಿದೆ. ಅಂದರೆ ಎದುರಾಳಿ ತಂಡಗಳ ಮೈದಾನಗಳಲ್ಲಿ RCB ತಂಡದ ಅಸಲಿ ಆಟ ಅನಾವರಣಗೊಳ್ಳಲಿದೆ.

ಇತ್ತ ತವರು ಮೈದಾನದಲ್ಲೇ ಕಳಪೆ ಆಟ ಪ್ರದರ್ಶಿಸಿರುವ ಆರ್ಸಿಬಿ ಮುಂದಿನ 6 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು. ಹೀಗಾಗಿಯೇ ಆರ್ಸಿಬಿ ಪಾಲಿಗೆ ಮುಂದಿನ ಪಂದ್ಯಗಳು ಒಂದಾರ್ಥದಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎಂದೇ ಹೇಳಬಹುದು.



















