ಕಳೆದ ತಿಂಗಳಲ್ಲಿ ಪುರುಷರ ಕ್ರಿಕೆಟ್ನ ವಾರ್ಷಿಕ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಭಾರತ ಮಹಿಳಾ ತಂಡದ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ವಾರ್ಷಿಕ ಒಪ್ಪಂದವನ್ನು 3 ಗ್ರೇಡ್ಗಳಾಗಿ ವಿಭಾಗಿಸಲಾಗಿದ್ದು, ಇದರಲ್ಲಿ ಎ ಗ್ರೇಡ್, ಬಿ ಗ್ರೇಡ್ ಹಾಗೂ ಸಿ ಗ್ರೇಡ್ ಎಂದು ವಿಭಾಗಿಸಲಾಗಿದೆ.
ವಾರ್ಷಿಕ ಒಪ್ಪಂದದ ಪ್ರಕಾರ ಎ ಗ್ರೇಡ್ನಲ್ಲಿರುವ ಆಟಗಾರ್ತಿಯರು ವರ್ಷಕ್ಕೆ ಅತ್ಯಧಿಕ ಅಂದರೆ ತಲಾ 50 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಹಾಗೆಯೇ ಬಿ ಗ್ರೇಡ್ನಲ್ಲಿರುವ ಆಟಗಾರ್ತಿಯರು 30 ಲಕ್ಷ ಸಂಬಳ ಪಡೆದರೆ, ಸಿ ಕ್ಯಾಟಗರಿಯ ಆಟಗಾರ್ತಿಯರು ತಲಾ 10 ಲಕ್ಷ ರೂ. ವಾರ್ಷಿಕ ವೇತನ ಪಡೆಯಲ್ಲಿದ್ದಾರೆ.
ವಾಸ್ತವವಾಗಿ ಪ್ರತಿ ಬಾರಿಯೂ ಎ ಕೆಟಗರಿಯಲ್ಲಿ ಐವರು ಆಟಗಾರ್ತಿಯರು ಇರುತ್ತಿದ್ದರು. ಆದರೆ ಈ ಬಾರಿ ಮಂಡಳಿ ಕೇವಲ 3 ಆಟಗಾರ್ತಿಯರನ್ನು ಎ ಕೆಟಗರಿಯಲ್ಲಿ ಉಳಿಸಿಕೊಂಡಿದೆ. ಇದರಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಹಾಗೂ ದೀಪ್ತಿ ಶರ್ಮಾ ಸೇರಿದ್ದಾರೆ. ಈ ಮೂವರು ಆಟಗಾರ್ತಿಯರು ವರ್ಷಕ್ಕೆ ತಲಾ 50 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.
ಬಿ ಕೆಟಗರಿಯಲ್ಲಿ ಐವರು ಆಟಗಾರ್ತಿಯರಿದ್ದು, ಇದರಲ್ಲಿ ರೇಣುಕಾ ಸಿಂಗ್ ಠಾಕೂರ್, ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಸೇರಿದ್ದಾರೆ. ಈ ಐವರು ವರ್ಷಕ್ಕೆ 30 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.
ಹಾಗೆಯೇ ಸಿ ಕೆಟಗರಿಯಲ್ಲಿ 9 ಆಟಗಾರ್ತಿಯರಿದ್ದು, ಮೇಘನಾ ಸಿಂಗ್, ದೇವಿಕಾ ವೈದ್ಯ, ಸಬ್ಬಿನೇನಿ ಮೇಘನಾ, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೋಲ್ ಮತ್ತು ಯಾಸ್ತಿಕಾ ಭಾಟಿಯಾ ಸೇರಿದ್ದಾರೆ. ಇವರು ವರ್ಷಕ್ಕೆ ತಲಾ 10 ಲಕ್ಷ ರೂ ವೇತನ ಪಡೆಯಲ್ಲಿದ್ದಾರೆ.
ಇನ್ನು ಈ ವಾರ್ಷಿಕ ಒಪ್ಪಂದದಲ್ಲಿ ಕೆಟಗರಿಯಿಂದ ಕೆಳಗೆ ಜಾರಿದ ಆಟಗಾರ್ತಿಯರನ್ನು ನೋಡುವುದಾದರೆ, ಕಳೆದ ಬಾರಿ ಎ ಕೆಟಗರಿಯಲ್ಲಿದ್ದ ಪೂನಂ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಗಾಯಕ್ವಾಡ್ ಎ ಕೆಟಗರಿಯಿಂದ ಬಿಗೆ ಕುಸಿದಿದ್ದರೆ, ಪೂನಂ ಒಪ್ಪಂದದಿಂದಲೇ ಹೊರಬಿದ್ದಿದ್ದಾರೆ.
ಬಿ ಕೆಟಗರಿಯಲ್ಲಿ ಶೆಫಾಲಿ ಮಾತ್ರ ಹಾಗೇ ಉಳಿದಿದ್ದರೆ, ಜೆಮಿಮಾ ಮತ್ತು ರಿಚಾ ಬಡ್ತಿ ಪಡೆದಿದ್ದಾರೆ. ಹಿಂದಿನ ಒಪ್ಪಂದದಲ್ಲಿ ಈ ಇಬ್ಬರು ಸಿ ಕೆಟಗರಿಯಲ್ಲಿ ಸ್ಥಾನ ಪಡೆದಿದ್ದರು. ಇನ್ನು ರೇಣುಕಾ ಸಿಂಗ್ ಮೊದಲ ಬಾರಿಗೆ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದು, ಪೂಜಾ ಬಿಯಿಂದ ಸಿಗೆ ಜಾರಿದ್ದಾರೆ.
Published On - 4:18 pm, Thu, 27 April 23