IPL 2023: RCB ತಂಡವು ಐಪಿಎಲ್ನಲ್ಲಿ ಈಗಾಗಲೇ 8 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿದರೆ, ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇಲ್ಲಿ ಆರ್ಸಿಬಿ ಸೋಲಿಗೆ ಮುಖ್ಯ ಕಾರಣವಾಗಿರುವುದು ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ.
ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಉತ್ತಮ ಪ್ರದರ್ಶನ ನೀಡಿದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಸಂಪೂರ್ಣ ವಿಫಲರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಆಡಿರುವ 8 ಪಂದ್ಯಗಳಲ್ಲಿ ಆರ್ಸಿಬಿ ತಂಡ ಮಿಡಲ್ ಆರ್ಡರ್ ಬ್ಯಾಟರ್ಗಳು ಕಲೆಹಾಕಿದ ರನ್ಗಳು.
ಇಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಮಹಿಪಾಲ್ ಲೋಮ್ರೊರ್ ಇದುವರೆಗೆ ಕೇವಲ 75 ರನ್ ಕಲೆಹಾಕಿದರೆ, ಫಿನಿಶರ್ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್ ಇದುವರೆಗೆ 83 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗೆಯೇ ಆಲ್ರೌಂಡರ್ ಶಹಬಾಝ್ ಅಹ್ಮದ್ ಕೇವಲ 42 ರನ್ ಗಳಿಸಿದ್ದಾರೆ. ಇನ್ನು ಸುಯಶ್ ಪ್ರಭುದೇಸಾಯಿ ಇದುವರೆಗೆ ಕಲೆಹಾಕಿರುವುದು ಕೇವಲ 29 ರನ್ ಮಾತ್ರ. ಇದಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿರುವ ಅನೂಜ್ ರಾವತ್ 3 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 16 ರನ್ ಅಷ್ಟೇ.
ಇನ್ನು 5 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವನಿಂದು ಹಸರಂಗ ಕಡೆಯಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಏಕೆಂದರೆ ಹಸರಂಗ ಬೌಲಿಂಗ್ನಲ್ಲಿ 6 ವಿಕೆಟ್ ಪಡೆದರೆ, ಬ್ಯಾಟಿಂಗ್ನಲ್ಲಿ ಕೇವಲ 13 ರನ್ ಮಾತ್ರ ಕಲೆಹಾಕಿದ್ದಾರೆ. ಅಂದರೆ ಆಲ್ರೌಂಡರ್ ಪ್ರದರ್ಶನ ನೀಡುವಲ್ಲಿ ಲಂಕಾ ಸ್ಪಿನ್ನರ್ ಸಂಪೂರ್ಣ ವಿಫಲರಾಗಿದ್ದಾರೆ ಎನ್ನಬಹುದು.
ಇತ್ತ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಆಟಗಾರನಾಗಿ ಮೈಕೆಲ್ ಬ್ರೇಸ್ವೆಲ್ ಇದ್ದರೂ ಆರ್ಸಿಬಿ ಅವಕಾಶ ನೀಡಿಲ್ಲ ಎಂಬುದೇ ಅಚ್ಚರಿ. ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಬ್ರೇಸ್ವೆಲ್ 2 ವಿಕೆಟ್ ಪಡೆದಿದ್ದರು. ಅಲ್ಲದೆ ಒಂದು ಬಾರಿ ಬ್ಯಾಟ್ ಬೀಸಿ 19 ರನ್ ಗಳಿಸಿದ್ದರು.
ಆದರೆ ವನಿಂದು ಹಸರಂಗ ಆಗಮನದ ಬೆನ್ನಲ್ಲೇ ಮೈಕೆಲ್ ಬ್ರೇಸ್ವೆಲ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಾಯಿತು. ಇತ್ತ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಸತತ ವೈಫಲ್ಯ ಹೊಂದುತ್ತಿದ್ದರೂ, ಅತ್ಯುತ್ತಮ ಸ್ಪೋಟಕ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಬ್ರೇಸ್ವೆಲ್ಗೆ ಮಾತ್ರ ಅವಕಾಶ ನೀಡಿರಲಿಲ್ಲ.
ಅದರಲ್ಲೂ ಚಿನ್ನಸ್ವಾಮಿ ಮೈದಾನವು ಬ್ಯಾಟ್ಸ್ಮನ್ಗಳ ಸ್ವರ್ಗ. ಇಲ್ಲೂ ಕೂಡ ಆರ್ಸಿಬಿ ವನಿಂದು ಹಸರಂಗ ಹಾಗೂ ಡೇವಿಡ್ ವಿಲ್ಲಿಯನ್ನು ಕಣಕ್ಕಿಳಿಸಿ ಹೊಡಿಬಡಿ ದಾಂಡಿಗ ಎನಿಸಿಕೊಂಡಿರುವ ಬ್ರೇಸ್ವೆಲ್ರನ್ನು ಹೊರಗಿಟ್ಟಿರುವುದೇ ಅಚ್ಚರಿ.
ಇಲ್ಲಿ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವಿಫಲರಾಗುತ್ತಿದ್ದ ಕಾರಣ ಬ್ಯಾಟಿಂಗ್ ಆಲ್ರೌಂಡರ್ ಎನಿಸಿಕೊಂಡಿರುವ ಬ್ರೇಸ್ವೆಲ್ ಉತ್ತಮ ಆಯ್ಕೆಯಾಗಿದ್ದರು. ಅಲ್ಲದೆ ಅವರನ್ನು ಪಾರ್ಟ್ ಟೈಮ್ ಬೌಲರ್ ಆಗಿಯೂ ಕೂಡ ಬಳಸಿಕೊಳ್ಳಬಹುದಿತ್ತು. ಅಷ್ಟೇ ಅಲ್ಲದೆ ಮ್ಯಾಕ್ಸ್ವೆಲ್ ಅವರನ್ನು ಸಹ ಹೆಚ್ಚುವರಿ ಸ್ಪಿನ್ನರ್ ಆಗಿ ಬಳಸಿಕೊಳ್ಳುವ ಉತ್ತಮ ಅವಕಾಶವಿತ್ತು.
ಇದಾಗ್ಯೂ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಇಬ್ಬರು ಬೌಲಿಂಗ್ ಆಲ್ರೌಂಡರ್ಗಳನ್ನು ಕಣಕ್ಕಿಳಿಸಿ ಚೇಸಿಂಗ್ಗೆ ಮುಂದಾಗಿರುವುದೇ ಅಚ್ಚರಿ. ಒಟ್ಟಿನಲ್ಲಿ ಮೈಕೆಲ್ ಬ್ರೇಸ್ವೆಲ್ನಂತಹ ಸ್ಪೋಟಕ ಬ್ಯಾಟರ್ ತಂಡದಲ್ಲಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸರಿಯಾಗಿ ಬಳಸಿಕೊಳ್ಳದಿರುವುದು ವಿಪರ್ಯಾಸವೇ ಸರಿ.
Published On - 10:10 pm, Thu, 27 April 23