Updated on: Apr 09, 2023 | 10:08 PM
IPL 2023: ಕ್ರಿಕೆಟ್ ಅಂಗಳದಲ್ಲಿ ಏಕಾಂಗಿ ಹೋರಾಟ ಹೇಗಿರುತ್ತೆ ಎಂದು ತಿಳಿಯಲು ಐಪಿಎಲ್ನ 14ನೇ ಪಂದ್ಯದಲ್ಲಿ ಶಿಖರ್ ಧವನ್ ಮಾಡಿದ ಬ್ಯಾಟಿಂಗ್ ಅನ್ನು ವೀಕ್ಷಿಸಲೇಬೇಕು. ಹೈದರಾಬಾದ್ನಲ್ಲಿ ನಡೆದ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಎಸ್ಆರ್ಹೆಚ್ ಬೌಲಿಂಗ್ ಆಯ್ದುಕೊಂಡಿತು.
ಬೃಹತ್ ಮೊತ್ತ ಪೇರಿಸುವ ಇರಾದೆಯೊಂದಿಗೆ ಕಣಕ್ಕಿಳಿದ ಪಂಜಾಬ್ ಕಿಂಗ್ಸ್ಗೆ ಎಸ್ಆರ್ಹೆಚ್ ಬೌಲರ್ಗೆ ಆರಂಭಿಕ ಆಘಾತ ನೀಡಿದ್ದರು. ಕೇವಲ 23 ರನ್ಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್ ತಂಡವು ಆ ಬಳಿಕ ಚೇತರಿಸಿಕೊಳ್ಳುವ ಪ್ರಯತ್ನ ಮಾಡಿತು. ಆದರೆ 88 ರನ್ಗಳಿಸುಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಅಂತ್ಯಗೊಳಿಸುವ ಹಂತಕ್ಕೆ ಬಂದು ನಿಂತಿತು.
ಆದರೆ ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ ಮಾತ್ರ ಬಂಡೆಯಂತೆ ಒಂದೆಡೆ ಕ್ರೀಸ್ ಕಚ್ಚಿ ನಿಂತಿದ್ದರು. ಎಸ್ಆರ್ಹೆಚ್ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಧವನ್ ರನ್ ಪೇರಿಸುತ್ತಾ ಸಾಗಿದರು. ಪರಿಣಾಮ ಪಂಜಾಬ್ ಕಿಂಗ್ಸ್ ತಂಡದ ಮೊತ್ತ 100ರ ಗಡಿದಾಟಿತು.
16ನೇ ಓವರ್ ವೇಳೆ ಕೊನೆಯ ಬ್ಯಾಟ್ಸ್ಮನ್ ಮೋಹಿತ್ ರಥಿ ಕ್ರೀಸ್ಗೆ ಆಗಮಿಸಿದರೂ, ಶಿಖರ್ ಧವನ್ ಕೇವಲ 2 ಬಾರಿ ಮಾತ್ರ ಸ್ಟ್ರೈಕ್ ನೀಡಿದ್ದರು. ಅಂದರೆ ಕೊನೆಯ 22 ಎಸೆತಗಳನ್ನೂ ಕೂಡ ಏಕಾಂಗಿಯಾಗಿ ಶಿಖರ್ ಧವನ್ ಆಡಿದ್ದರು.
ಇತ್ತ ಧವನ್ ವಿಕೆಟ್ ಪಡೆಯಲು ಎಸ್ಆರ್ಹೆಚ್ ನಾಯಕ ಐಡೆನ್ ಮಾರ್ಕ್ರಾಮ್ ನಾನಾ ತಂತ್ರಗಳನ್ನು ಹೂಡಿದರೂ ಫಲ ನೀಡಲಿಲ್ಲ. ಬದಲಾಗಿ ಶಿಖರ್ ಅಬ್ಬರ ಮುಂದುವರೆಯಿತು. ಕೊನೆಯ ವಿಕೆಟ್ನಲ್ಲಿ 55 ರನ್ ಕಲೆಹಾಕಿದರು. ಈ ಐವತ್ತೈದು ರನ್ಗಳಲ್ಲಿ ಶಿಖರ್ ಧವನ್ 54 ರನ್ ಬಾರಿಸಿದ್ದರು ಎಂಬುದೇ ವಿಶೇಷ.
ಅಲ್ಲದೆ ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 143 ಕ್ಕೆ ತಂದು ನಿಲ್ಲಿಸಿದರು. 66 ಎಸೆತಗಳನ್ನು ಎದುರುಸಿದ ಧವನ್ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್ನೊಂದಿಗೆ ಅಜೇಯ 99 ರನ್ಗಳಿಸಿ ಮಿಂಚಿದರು.
ಈ ಅತ್ಯಧ್ಭುತ ಅರ್ಧಶತಕದ ಇನಿಂಗ್ಸ್ನೊಂದಿಗೆ ಶಿಖರ್ ಧವನ್ ವಿರಾಟ್ ಕೊಹ್ಲಿಯ ವಿಶೇಷ ದಾಖಲೆಯನ್ನು ಮುರಿದರು. ಅಂದರೆ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್ಗಳಿಸಿದವರ ಪಟ್ಟಿಯಲ್ಲಿ ಶಿಖರ್ ಧವನ್ 2ನೇ ಸ್ಥಾನಕ್ಕೇರಿದ್ದಾರೆ.
ಇದಕ್ಕೂ ಮುನ್ನ 50 ಬಾರಿ 50+ ಸ್ಕೋರ್ ಕಲೆಹಾಕುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು. ಇದೀಗ ಎಸ್ಆರ್ಹೆಚ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಧವನ್ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಶಿಖರ್ ಧವನ್ 208 ಐಪಿಎಲ್ ಇನಿಂಗ್ಸ್ನಲ್ಲಿ ಒಟ್ಟು 51 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 49 ಅರ್ಧಶತಕಗಳು ಸೇರಿವೆ. ಈ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು 50 ಕ್ಕಿಂತ ಅಧಿಕ ರನ್ ಕಲೆಹಾಕಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಈ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೇವಿಡ್ ವಾರ್ನರ್. 165 ಐಪಿಎಲ್ ಇನಿಂಗ್ಸ್ ಆಡಿರುವ ವಾರ್ನರ್ ಒಟ್ಟು 61 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಶಿಖರ್ ಧವನ್ 2ನೇ ಸ್ಥಾನಕ್ಕೇರಿರುವುದು ವಿಶೇಷ.