IPL 2023: ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ನ 19ನೇ ಪಂದ್ಯದ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು ಆರ್ಸಿಬಿ ತಂಡದ ದಾಖಲೆಯೊಂದನ್ನು ಮುರಿದಿದೆ. ಎಸ್ಆರ್ಹೆಚ್ ನಡುವಣ ಪಂದ್ಯದಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡವು ಬೌಲಿಂಗ್ ಆಯ್ಕೆ ಮಾಡಿತ್ತು.
ಅದರಂತೆ ಇನಿಂಗ್ಸ್ ಆರಂಭಿಸಿದ ಎಸ್ಆರ್ಹೆಚ್ ತಂಡಕ್ಕೆ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೂಕ್ 55 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 12 ಫೋರ್ನೊಂದಿಗೆ ಅಜೇಯ 100 ರನ್ ಬಾರಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಎಸ್ಆರ್ಹೆಚ್ ತಂಡದ ಮೊತ್ತವು 4 ವಿಕೆಟ್ ನಷ್ಟಕ್ಕೆ 228 ರನ್ಗೆ ಬಂದು ನಿಂತಿತು.
ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದು ಸನ್ರೈಸರ್ಸ್ ಹೈದರಾಬಾದ್ ಪಾಲಾಯಿತು. ಅಂದರೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ಆರ್ಸಿಬಿ ಹೆಸರಿನಲ್ಲಿತ್ತು.
2019 ರಲ್ಲಿ ಆರ್ಸಿಬಿ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ನಷ್ಟಕ್ಕೆ 213 ರನ್ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು ಎಸ್ಆರ್ಹೆಚ್ ತಂಡವು ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಎಸ್ಆರ್ಹೆಚ್ ನೀಡಿದ 229 ರನ್ಗಳ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡದ ಪರ ನಾಯಕ ನಿತೀಶ್ ರಾಣಾ (75) ಹಾಗೂ ರಿಂಕು ಸಿಂಗ್ (58) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇದಾಗ್ಯೂ ಅಂತಿಮವಾಗಿ ಕೆಕೆಆರ್ ತಂಡವು 205 ರನ್ಗಳಿಸುವುದರೊಂದಿಗೆ 23 ರನ್ಗಳಿಂದ ಸೋಲೊಪ್ಪಿಕೊಂಡಿದೆ.