
ಐಪಿಎಲ್ ಸೀಸನ್ 16 ಮಿನಿ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿಯು ಒಟ್ಟು 7 ಆಟಗಾರರನ್ನು ಖರೀದಿಸಿದೆ. ಈ 7 ಆಟಗಾರರಲ್ಲಿ ಜಮ್ಮು ಕಾಶ್ಮೀರದ ಅವಿನಾಶ್ ಸಿಂಗ್ ಕೂಡ ಒಬ್ಬರು. ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅವಿನಾಶ್ ಅವರನ್ನು ಆರ್ಸಿಬಿ 60 ಲಕ್ಷ ರೂ. ನೀಡಿ ಖರೀದಿಸಿದೆ.

ಆದರೆ ಅಚ್ಚರಿಯ ಅಂಶವೆಂದರೆ ಅವಿನಾಶ್ ಸಿಂಗ್ ಇದುವರೆಗೆ ಜಮ್ಮು ಕಾಶ್ಮೀರ ಪರ ದೇಶೀಯ ಕ್ರಿಕೆಟ್ ಆಡಿಲ್ಲ. ಅಂದರೆ ದೇಶೀಯ ಕ್ರಿಕೆಟ್‌ಗೆ ಇನ್ನೂ ಕೂಡ ಪಾದಾರ್ಪಣೆ ಮಾಡಿಲ್ಲ. ಇದಾಗ್ಯೂ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಅವಿನಾಶ್ ಸಿಂಗ್ ಖರೀದಿಗೆ ಕೆಕೆಆರ್ ಹಾಗೂ ಆರ್ಸಿಬಿ ನಡುವೆ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ 60 ಲಕ್ಷ ರೂ. ನೀಡುವ ಮೂಲಕ ಆರ್ಸಿಬಿ ಜಮ್ಮು ಕಾಶ್ಮೀರದ ವೇಗಿಯನ್ನು ತನ್ನದಾಗಿಸಿಕೊಂಡಿದೆ.

ಈ ಹರಾಜು ಪ್ರಕ್ರಿಯೆ ಬೆನ್ನಲ್ಲೇ ಆರ್ಸಿಬಿ ಖರೀದಿಸಿದ ಈ ಆಟಗಾರ ಯಾರು ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ಇದೀಗ ಅವಿನಾಶ್ ಸಿಂಗ್ಗೆ ಲೆದರ್ ಬಾಲ್ ಕ್ರಿಕೆಟ್ನಲ್ಲಿ ಹೆಚ್ಚಿನ ಅನುಭವ ಇಲ್ಲ ಎಂಬ ವಿಚಾರ ಕೂಡ ಬಹಿರಂಗವಾಗಿದೆ. ಇದಾಗ್ಯೂ ಆರ್ಸಿಬಿ ಜಮ್ಮು ಕಾಶ್ಮೀರದ ವೇಗಿಯನ್ನು ಖರೀದಿಸಲು ಒಂದು ಮುಖ್ಯ ಕಾರಣ ಕೂಡ ಇದೆ.

ಈ ವರ್ಷ ಆರ್ಸಿಬಿ ಜಮ್ಮು ಕಾಶ್ಮೀರದಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಿತ್ತು. ಈ ಅಭ್ಯಾಸ ಶಿಬಿರದಲ್ಲಿ ಟೆನಿಸ್ ಬಾಲ್ ಆಟಗಾರ ಅವಿನಾಶ್ ಸಿಂಗ್ ಕೂಡ ಭಾಗವಹಿಸಿದ್ದರು. ಯುವ ಆಟಗಾರನ ಬೌಲಿಂಗ್ ಕೌಶಲ್ಯದಿಂದ ಆರ್ಸಿಬಿ ಫ್ರಾಂಚೈಸಿಯ ಅಧಿಕಾರಿಗಳು ಪ್ರಭಾವಿತರಾಗಿದ್ದರು. ಆನಂತರ ಅವಿನಾಶ್ ತನ್ನ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಪುಣೆಗೆ ತೆರಳಿ ಕ್ರಿಕೆಟ್ ಅಭ್ಯಾಸ ಮುಂದುವರೆಸಿದ್ದರು.

ಮೊದಲೇ ಅಭ್ಯಾಸ ಶಿಬಿರದಲ್ಲಿ ಅವಿನಾಶ್ ಸಿಂಗ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಅರಿತಿದ್ದ ಆರ್ಸಿಬಿ ಕಡಿಮೆ ಮೊತ್ತಕ್ಕೆ ತಂಡಕ್ಕೆ ಖರೀದಿಸಲು ಮುಂದಾಗಿದೆ. ಆದರೆ ಕೆಕೆಆರ್ ಫ್ರಾಂಚೈಸಿ ಕೂಡ ಯುವ ವೇಗಿಯ ಖರೀದಿಗೆ ಆಸಕ್ತಿ ತೋರಿಸಿತು. ಈ ಪೈಪೋಟಿಯಲ್ಲಿ ಅಂತಿಮವಾಗಿ ಆರ್ಸಿಬಿ ಫ್ರಾಂಚೈಸಿ 60 ಲಕ್ಷ ರೂ. ನೀಡಿ ಅವಿನಾಶ್ ಸಿಂಗ್ ಅವರನ್ನು ಖರೀದಿಸಿದೆ. ಇದೀಗ ಚೊಚ್ಚಲ ಐಪಿಎಲ್ ಅವಕಾಶ ಪಡೆದಿರುವ ಅವಿನಾಶ್ಗೆ ಉತ್ತಮ ವೇದಿಕೆ ಸಿಕ್ಕಿದೆ. ಹೀಗೆ ಸಿಕ್ಕ ಅವಕಾಶವನ್ನು ಜಮ್ಮು ಕಾಶ್ಮೀರದ ಯುವ ವೇಗಿ ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

RCB ಹೊಸ ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜಾಕ್ಸ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.