IPL 2023: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 7000 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಲೀಗ್ ಕ್ರಿಕೆಟ್ನಲ್ಲಿ ಒಂದೇ ತಂಡದ ಪರ ಕಣಕ್ಕಿಳಿದು 7 ಸಾವಿರ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನು ಕೂಡ ಬರೆದಿದ್ದಾರೆ. ಕಿಂಗ್ ಕೊಹ್ಲಿ 2008 ರಿಂದ ಆರ್ಸಿಬಿ ಪರ ಆಡುತ್ತಿದ್ದು, ಇದೀಗ ಒಂದೇ ತಂಡದ ಹಲವು ದಾಖಲೆ ಬರೆದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಾವಿರ ರನ್ ಕಲೆಹಾಕಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ಬರೆದಿದ್ದಾರೆ. ಈ ಹಿಂದೆ ಡೇವಿಡ್ ವಾರ್ನರ್, ರೋಹಿತ್ ಶರ್ಮಾ ಕೆಕೆಆರ್ ವಿರುದ್ಧ ಸಾವಿರ ರನ್ ಪೂರೈಸಿದ್ದರು. ಇದೀಗ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಾವಿರ ರನ್ ಕಲೆಹಾಕಿ ವಿಶೇಷ ಸಾಧನೆ ಮಾಡಿದ್ದಾರೆ.
ಇನ್ನು ಆರ್ಸಿಬಿ ಪರ ಅತ್ಯಧಿಕ ಶತಕ ಹಾಗೂ ಅರ್ಧಶತಕ ಬಾರಿಸಿದ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಇದುವರೆಗೆ 49 ಅರ್ಧಶತಕ ಹಾಗೂ 5 ಶತಕಗಳನ್ನು ಸಿಡಿಸಿದ್ದಾರೆ.
ಹಾಗೆಯೇ ಐಪಿಎಲ್ನಲ್ಲಿ ಅತೀ ಹೆಚ್ಚು 50+ ರನ್ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕಿಂಗ್ ಕೊಹ್ಲಿ ಐಪಿಎಲ್ನಲ್ಲಿ ಒಟ್ಟು 55 ಬಾರಿ ಫಿಫ್ಟಿ ಪ್ಲಸ್ ಸ್ಕೋರ್ಗಳಿಸಿದ್ದಾರೆ.
ಇದಲ್ಲದೆ ಐಪಿಎಲ್ನಲ್ಲಿ 50 ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೂಡ ಕೊಹ್ಲಿ ಬರೆದಿದ್ದಾರೆ. ಈ ಪಟ್ಟಿಯಲ್ಲಿ 59 ಅರ್ಧಶತಕ ಬಾರಿಸಿರುವ ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿದ್ದಾರೆ.
ಸದ್ಯ 225 ಐಪಿಎಲ್ ಇನಿಂಗ್ಸ್ಗಳ ಮೂಲಕ 7 ಸಾವಿರ ರನ್ ಪೂರೈಸಿರುವ ವಿರಾಟ್ ಕೊಹ್ಲಿ, ಹಲವು ದಾಖಲೆಗಳತ್ತ ದಾಪುಗಾಲಿಟ್ಟಿರುವುದು ವಿಶೇಷ.
Published On - 10:56 pm, Sat, 6 May 23