Updated on: May 10, 2023 | 5:40 PM
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 54ನೇ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆರ್ಸಿಬಿ ತಂಡವನ್ನು ಮಣಿಸಿ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಆರ್ಸಿಬಿ ಸೋಲು ಕಂಡಿತ್ತಾದರೂ ಕಿಂಗ್ ಕೊಹ್ಲಿ ತಮ್ಮ ಸರಳತೆಯಿಂದಾಗಿ ಮೈದಾನದಲ್ಲಿ ನೆರೆದಿದ್ದವರ ಹೃದಯ ಗೆದ್ದರು.
ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಅಭ್ಯಾಸ ನಡೆಸಿ ಡ್ರೆಸಿಂಗ್ ಕೋಣೆಗೆ ತೆರಳುತ್ತಿದ್ದ ಕೊಹ್ಲಿಯ ಬಳಿ, ಆ ಮೈದಾನದ ಬಾಲ್ ಬಾಯ್ ತಮ್ಮ ಬ್ಯಾಟನ್ನು ಉಡುಗೊರೆಯಾಗಿ ಕೇಳಿದ್ದಾನೆ. ಅಭಿಮಾನಿಯ ಬೇಡಿಕೆಗೆ ಸ್ಪಂದಿಸಿದ ಕೊಹ್ಲಿ ತನ್ನ ಹಸ್ತಾಕ್ಷರವಿರುವ ಬ್ಯಾಟನ್ನೇ ಗಿಫ್ಟಾಗಿ ನೀಡಿದ್ದಾರೆ.
ವಾಸ್ತವವಾಗಿ ಅಭ್ಯಾಸ ಮುಗಿಸಿ ತೆರಳುತ್ತಿದ್ದ ಕೊಹ್ಲಿಯ ಬಳಿ, ಬಾಲ್ಬಾಯ್ ಒಬ್ಬ ಕೊಹ್ಲಿಯಲ್ಲಿ ಆಟೋಗ್ರಾಫ್ಗಾಗಿ ವಿನಂತಿಸಿದ್ದಾನೆ. ಆಗ ಕೊಹ್ಲಿ ತನ್ನ ಕ್ರಿಕೆಟ್ ಬ್ಯಾಟನ್ನು ಹುಡುಗನಿಗೆ ನೀಡುವಂತೆ ಮೈದಾನದಲ್ಲಿದ್ದ ಬೇರೊಬ್ಬನಿಗೆ ಸೂಚಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ನಡೆಯುತ್ತಿರುವ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ 135.19 ಸ್ಟ್ರೈಕ್ ರೇಟ್‌ನಲ್ಲಿ 419 ರನ್ ಸಿಡಿಸಿದ್ದಾರೆ. ಪಂದ್ಯಾವಳಿಯಲ್ಲಿನ ಎಲ್ಲಾ ಬ್ಯಾಟರ್‌ಗಳ ಪೈಕಿ, ಅವರು ಹೆಚ್ಚು (6) ಅರ್ಧ ಶತಕಗಳನ್ನು ಹೊಡೆದಿದ್ದಾರೆ.
ಆದಾಗ್ಯೂ, ಪವರ್‌ಪ್ಲೇ ನಂತರ ಕೊಹ್ಲಿ ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆಯಾಗುತ್ತದೆ. ಇದರಿಂದ ಕೊಹ್ಲಿ ಬಳಿಕ ಬರುವ ಬ್ಯಾಟರ್ಗಳಿಗೆ ಒತ್ತಡವುಂಟಾಗುತ್ತಿದೆ ಎಂಬ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ತನ್ನ ಸ್ಟ್ರೈಕ್ ರೇಟ್ ಸಮಸ್ಯೆಯನ್ನು ಸರಿಪಡಿಸುವ ಉದ್ದೇಶದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿದಿದ್ದ ಕೊಹ್ಲಿ ಕೇವಲ 1 ರನ್ಗೆ ಸುಸ್ತಾದರು.