
IPL 2023: ಐಪಿಎಲ್ನ ದ್ವಿತಿಯಾರ್ಧಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ಸ್ಲೋ ಓವರ್ ರೇಟ್ ತಪ್ಪು ಮಾಡಿದ್ರೆ ಮುಂದಿನ ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ಐಪಿಎಲ್ನ ನೀತಿ ಸಂಹಿತೆ ಪ್ರಕಾರ, ಆರ್ಸಿಬಿ ತಂಡದ ನಾಯಕರುಗಳು ಈಗಾಗಲೇ ಎರಡು ಬಾರಿ ತಪ್ಪು ಮಾಡಿದ್ದಾರೆ. ಮೊದಲ ಬಾರಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ನಿಗದಿತ ಸಮಯದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ಇದಾದ ಬಳಿಕ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹಂಗಾಮಿ ನಾಯಕರಾಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಕೂಡ ಇದೇ ತಪ್ಪನ್ನು ಪುನರಾವರ್ತಿಸಿದ್ದರು. ಒಂದೇ ತಪ್ಪನ್ನು ಪುನರಾವರ್ತಿಸಿದ್ದ ಪರಿಣಾಮ ಕಿಂಗ್ ಕೊಹ್ಲಿಗೆ ಐಪಿಎಲ್ ನೀತಿ ಸಂಹಿತೆ ಪ್ಯಾನೆಲ್ 24 ಲಕ್ಷ ರೂ. ದಂಡ ವಿಧಿಸಿತ್ತು. ಅಷ್ಟೇ ಅಲ್ಲದೆ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿದ್ದ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ಪಾವತಿಸುವಂತೆ ಸೂಚಿಸಿತ್ತು.

ಇದೀಗ ಆರ್ಸಿಬಿ ನಾಯಕನಿಗೆ ನಿಧಾನಗತಿಯ ಓವರ್ ಕುರಿತಾಗಿ ಖಡಕ್ ಎಚ್ಚರಿಕೆ ನೀಡಲಾಗಿದೆ. ಇದೇ ತಪ್ಪನ್ನು ಮೂರನೇ ಬಾರಿ ಪುನರಾವರ್ತಿಸಿದರೆ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ ಎಂದು ತಿಳಿಸಲಾಗಿದೆ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ವಿರಾಟ್ ಕೊಹ್ಲಿ ಅಥವಾ ಡುಪ್ಲೆಸಿಸ್ ನಿಗದಿತ ಸಮಯದೊಳಗೆ ಪಂದ್ಯ ಮುಗಿಸಬೇಕು. ಇಲ್ಲದಿದ್ದರೆ ಒಂದು ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.

ಐಸಿಸಿ ಟಿ20 ಕ್ರಿಕೆಟ್ ನಿಯಮದ ಪ್ರಕಾರ, 20 ಓವರ್ಗಳನ್ನು 90 ನಿಮಿಷದೊಳಗೆ ಪೂರ್ಣಗೊಳಿಸಬೇಕು. ಇಲ್ಲಿ ನೀಡಲಾಗಿರುವ 90 ನಿಮಿಷಗಳಲ್ಲಿ 5 ನಿಮಿಷವನ್ನು ಸ್ಟ್ರಾಟರ್ಜಿಕ್ ಟೈಮ್ ಔಟ್ಗೆ ನಿಗದಿ ಮಾಡಲಾಗಿದೆ. ಅದರಂತೆ ಬೌಲಿಂಗ್ ತಂಡವು ಕೇವಲ 1 ಗಂಟೆ 25 ನಿಮಿಷದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ಒಂದು ವೇಳೆ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಉಳಿದ ಓವರ್ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್ನಿಂದ ಒಬ್ಬ ಆಟಗಾರನನ್ನು 30 ಯಾರ್ಡ್ ಸರ್ಕಲ್ನಲ್ಲಿ ನಿಲ್ಲಿಸಬೇಕು. ಅಷ್ಟೇ ಅಲ್ಲದೆ ಈ ತಪ್ಪನ್ನು ಮೊದಲ ಬಾರಿಗೆ ಮಾಡಿದ್ರೆ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಇನ್ನು 2ನೇ ಬಾರಿ ಈ ತಪ್ಪು ಪುನರಾವರ್ತನೆಯಾದರೆ ನಾಯಕನಿಗೆ 24 ಲಕ್ಷ ರೂ. ಹಾಗೂ ಉಳಿದ ಪ್ಲೇಯಿಂಗ್ ಇಲೆವೆನ್ನ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗುತ್ತದೆ.

ಇನ್ನು ಇದೇ ತಪ್ಪು ಮೂರನೇ ಬಾರಿ ಪುನರಾವರ್ತನೆಯಾದರೆ, ನಾಯಕನಿಗೆ 30 ಲಕ್ಷ ರೂ. ದಂಡ ವಿಧಿಸಿ ಒಂದು ಪಂದ್ಯದಿಂದ ನಾಯಕನಿಗೆ ನಿಷೇಧ ಹೇರಲಾಗುತ್ತದೆ. ಅಲ್ಲದೆ ಪ್ಲೇಯಿಂಗ್ ಇಲೆವೆನ್ನ ಉಳಿದ ಆಟಗಾರರಿಗೆ 12 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ.50, ದಂಡ ವಿಧಿಸಲಾಗುತ್ತದೆ.

ಇದೀಗ ಆರ್ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಂಡಿರುವ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಎರಡು ಬಾರಿ ಸ್ಲೋ ಓವರ್ ರೇಟ್ಗೆ ಶಿಕ್ಷೆಗೆ ಗುರಿಯಾಗಿದ್ದಾರೆ. ಇದು ಮೂರನೇ ಬಾರಿ ಪುನರಾವರ್ತನೆಯಾದರೆ ಆ ಪಂದ್ಯದಲ್ಲಿ ಯಾರು ನಾಯಕರಾಗಿರುತ್ತಾರೋ, ಅವರನ್ನು ಮುಂದಿನ ಪಂದ್ಯದಿಂದ ನಿಷೇಧಿಸಲಾಗುತ್ತದೆ.

ಹೀಗಾಗಿ ಫಾಫ್ ಡುಪ್ಲೆಸಿಸ್ ಅಥವಾ ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 1 ಗಂಟೆ 25 ನಿಮಿಷದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸುವತ್ತ ಹೆಚ್ಚಿನ ಗಮನ ಹರಿಸಲೇಬೇಕು.