
ದುಬೈನಲ್ಲಿ ನಾಳೆ ನಡೆಯಲ್ಲಿರುವ ಐಪಿಎಲ್ ಮಿನಿ ಹರಾಜಿಗೆ ಒಟ್ಟು 333 ಕ್ರಿಕೆಟಿಗರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ 119 ಮಂದಿ ವಿದೇಶಿ ಆಟಗಾರರು ಹರಾಜಿಗೆ ಬರಲಿದ್ದಾರೆ. ಆದರೆ ಈ 119 ಮಂದಿ ಆಟಗಾರರ ಪೈಕಿ 30 ಆಟಗಾರರು ಮಾತ್ರ ಖರೀದಿದಾರರನ್ನು ಪಡೆಯಲ್ಲಿದ್ದಾರೆ. ಆದಾಗ್ಯೂ, ಈ ಮಿನಿ ಹರಾಜಿನಲ್ಲಿ ಈ ಐವರು ವಿದೇಶಿ ಆಟಗಾರರು ಮಾರಾಟವಾಗುವ ಸಾಧ್ಯತೆ ತೀರ ಕಡಿಮೆ ಇದೆ.

ರಿಲೀ ರೊಸ್ಸೌ: ಈ ವರ್ಷದ ಐಪಿಎಲ್ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ಮಾರಾಟವಾಗದೆ ಉಳಿಯುವ ಸಾಧ್ಯತೆಯಿದೆ. ತನ್ನ ಖಾತೆಯಲ್ಲಿ ಒಂದೆರಡು ಟಿ20 ಶತಕಗಳನ್ನು ಹೊಂದಿರುವ ಅನುಭವಿ ರಿಲೀ ರೊಸ್ಸೌ ಮಾರಾಟವಾಗದಿರಲು ಪ್ರಮುಖ ಕಾರಣ 2 ಕೋಟಿ ಮೂಲ ಬೆಲೆ. ರೊಸ್ಸೌ ಈ ಹಿಂದೆ 2014 ಮತ್ತು 2015 ರ ಋತುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು ಆದರೆ ಹೆಚ್ಚು ಅವಕಾಶ ಸಿಗಲಿಲ್ಲ ಮತ್ತು ಅವಕಾಶ ಸಿಕ್ಕಾಗ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. 34 ವರ್ಷದ ರೊಸ್ಸೌ ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.

ಜಿಮ್ಮಿ ನೀಶಮ್: ನ್ಯೂಜಿಲೆಂಡ್‌ನ 33 ವರ್ಷದ ಆಲ್‌ರೌಂಡರ್ ಜಿಮ್ಮಿ ನೀಶಮ್, ಟಿ20 ಸ್ವರೂಪದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿಯೂ ಆಡಿದ್ದಾರೆ. ಆದರೆ ಅವರಿಗೆ ಇದುವರೆಗೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಖರೀದಿಯಾಗದೆ ಉಳಿಯುವ ಸಾಧ್ಯತೆಗಳಿವೆ. ಜಿಮ್ಮಿ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ (2014), ಪಂಜಾಬ್ ಕಿಂಗ್ಸ್ (2020), ಮುಂಬೈ ಇಂಡಿಯನ್ಸ್ (2021), ಮತ್ತು ರಾಜಸ್ಥಾನ್ ರಾಯಲ್ಸ್ (2022) ಪರ ಆಡಿದ್ದಾರೆ. ಆದರೆ ಅವರು ಕಳೆದ 2 ಐಪಿಎಲ್ ಸೀಸನ್‌ಗಳಲ್ಲಿ ಒಟ್ಟು 10 ಕ್ಕಿಂತ ಕಡಿಮೆ ಸರಾಸರಿಯನ್ನು ಹೊಂದಿದ್ದಾರೆ.

ಕಾಲಿನ್ ಮುನ್ರೊ: 36 ವರ್ಷ ವಯಸ್ಸಿನ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟರ್ ಮುನ್ರೊ, ಈ ವರ್ಷದ ಹರಾಜಿನಲ್ಲಿ ಮಾರಾಟವಾಗದೆ ಉಳಿಯುವ ಸಾಧ್ಯತೆಗಳಿವೆ. ಮುನ್ರೊ ಮೂರು ಅಂತರರಾಷ್ಟ್ರೀಯ ಟಿ20 ಶತಕಗಳನ್ನು ಬಾರಿಸಿದ್ದಾರೆ. ಆದರೆ ಅವರ ಐಪಿಎಲ್ ವೃತ್ತಿಜೀವನ ಅಷ್ಟು ಯಶಸ್ವಿಕರವಾಗಿಲ್ಲ. ಅಲ್ಲದೆ ಅವರ ವಯಸ್ಸು ಕೂಡ ಅವರನ್ನು ಮಾರಾಟವಾಗದಂತೆ ತಡೆಯುವ ಸಾಧ್ಯತೆಗಳಿವೆ.

ಬೆನ್ ಕಟಿಂಗ್: ಆಸ್ಟ್ರೇಲಿಯಾದ ಕೆಳ ಕ್ರಮಾಂಕದ ಆಲ್‌ರೌಂಡರ್ ಬೆನ್ ಕಟಿಂಗ್ ಕೂಡ ಖರೀದಿದಾರರನ್ನು ಪಡೆಯುವ ಸಾಧ್ಯತೆಗಳಿಲ್ಲ. ಕಟಿಂಗ್ ಯಾರ್ಕರ್, ನಿಧಾನಗತಿಯ ಬೌಲ್ ಮಾಡುವ ಸಾಮರ್ಥ್ಯದ ಜೊತೆಗೆ ಪವರ್ ಹಿಟ್ಟಿಂಗ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಆದರೆ 2019 ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಆಡಿದ 36 ವರ್ಷ ವಯಸ್ಸಿನ ಕಟ್ಟಿಂಗ್ ಈ ವರ್ಷದ ಐಪಿಎಲ್ ಹರಾಜಿನಲ್ಲಿ ಮಾರಾಟವಾಗುವುದು ಅನುಮಾನ.

ಡೇವಿಡ್ ವಿಲ್ಲಿ: ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಇಂಗ್ಲೆಂಡ್ ಮಧ್ಯಮ ವೇಗಿ ವಿಲ್ಲಿ, ಈ ವರ್ಷದ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿಯುವ ಸಾಧ್ಯತೆಯಿದೆ. ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಗಾಯದ ಸಮಸ್ಯೆ ಮತ್ತು ಲಭ್ಯವಿರುವ ಸ್ಲಾಟ್‌ಗಳ ಸಂಖ್ಯೆಯಿಂದಾಗಿ 33 ವರ್ಷದ ಎಡಗೈ ಆಟಗಾರನಿಗೆ ಫ್ರಾಂಚೈಸಿಗಳು ಒಲವು ತೊರುವುದು ತೀರ ಕಡಿಮೆ.