
ಏಪ್ರಿಲ್ 12 ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 26ನೇ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಡೆಲ್ಲಿ ತಂಡ ಲೀಗ್ನಲ್ಲಿ ಎರಡನೇ ಗೆಲುವು ದಾಖಲಿಸಿತು. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿತು.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು. ಒಂದು ಹಂತದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಕ್ನೋ ತಂಡಕ್ಕೆ ಯುವ ಬ್ಯಾಟರ್ ಆಯುಷ್ ಬದೋನಿ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ನೆರವಾದರು.

ಈ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಬದೋನಿ ಕೊನೆಯವರೆಗೂ ಅಜೇಯರಾಗಿ ಉಳಿದು ಕೇವಲ35 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 55 ರನ್ ಕಲೆಹಾಕಿದರು. ಈ ಮೂಲಕ ಲಕ್ನೋ ತಂಡವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ದರು. ಅಲ್ಲದೆ ಕ್ಯಾಪ್ಟನ್ ಕೂಲ್ ಧೋನಿ ದಾಖಲೆಯನ್ನು ಸರಿಗಟ್ಟಿದರು.

ಮೇಲೆ ಹೇಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 7 ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬಂದ ಬದೋನಿ, ಅರ್ಷದ್ ಖಾನ್ ಜೊತೆ 42 ಎಸೆತಗಳಲ್ಲಿ 73 ರನ್ ಜೊತೆಯಾಟ ನಡೆಸಿದರು. ಹಾಗೆಯೇ ಐಪಿಎಲ್ ಇತಿಹಾಸದಲ್ಲಿ ಧೋನಿ ಅವರ ವಿಶೇಷ ದಾಖಲೆಯನ್ನು ಸರಿಗಟ್ಟಿದರು.

ವಾಸ್ತವವಾಗಿ ಐಪಿಎಲ್ ಇತಿಹಾಸದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಅತಿ ಹೆಚ್ಚು ಅರ್ಧಶತಕದ ಇನ್ನಿಂಗ್ಸ್ ಆಡಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಿಎಸ್ಕೆ ತಂಡದ ಮಾಜಿ ನಾಯಕ ಎಂಎಸ್ ಧೊನಿಯನ್ನು ಇದೀಗ ಬದೋನಿ ಸರಿಗಟ್ಟಿದ್ದಾರೆ.

ಧೋನಿ ಇದುವರೆಗೆ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 2 ಅರ್ಧಶತಕ ಸಿಡಿಸಿದ್ದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು. ಆದರೀಗ ಆ ದಾಖಲೆಯನ್ನು ಬದೋನಿ ಮುರಿದಿದ್ದಾರೆ. ಈ ಹಿಂದೆಯೇ ಒಂದು ಅರ್ಧಶತಕ ಸಿಡಿಸಿದ್ದ ಬದೋನಿ, ಡೆಲ್ಲಿ ವಿರುದ್ಧ 2ನೇ ಅರ್ಧಶತಕ ಸಿಡಿಸುವ ಮೂಲಕ ಧೋನಿಯನ್ನು ಸರಿಗಟ್ಟಿದ್ದಾರೆ.

ಇನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಇದುವರೆಗೆ 5 ಅರ್ಧಶತಕ ಸಿಡಿಸಿರುವ ಕೆಕೆಆರ್ ಬ್ಯಾಟರ್ ಆಂಡ್ರೆ ರಸೆಲ್ ಮೊದಲ ಸ್ಥಾನದಲ್ಲಿದ್ದಾರೆ. ಇವರ ಬಳಿಕ ತಲಾ 2 ಬಾರಿ ಈ ಸಾಧನೆ ಮಾಡಿರುವ ಆಯುಷ್ ಬದೋನಿ, ಪ್ಯಾಟ್ ಕಮ್ಮಿನ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.