2020 ರಲ್ಲಿ ಆರ್‌ಸಿಬಿ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಚೊಚ್ಚಲ ಆವೃತ್ತಿಯಲ್ಲೇ ಸಖತ್ ಸದ್ದು ಮಾಡಿದ್ದರು. ಆ ಮೂಲಕ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಆದರೆ ಸೀಸನ್ ಕಳೆದಂತೆ ಪಡಿಕ್ಕಲ್ ಆಟ ಹಳ್ಳ ಹಿಡಿದಿದ್ದು, ಅವರ ಐಪಿಎಲ್ ಭವಿಷ್ಯ ಅವನತಿಯತ್ತ ಸಾಗಿದೆ.
ಐಪಿಎಲ್ 2024 ಕ್ಕೂ ಮುನ್ನ ಟ್ರೆಡಿಂಗ್ ಮೂಲಕ ರಾಜಸ್ಥಾನ್ ತಂಡದಿಂದ ಲಕ್ನೋ ಸೂಪರ್ಜೈಂಟ್ಸ್ ತಂಡ ಸೇರಿಕೊಂಡಿದ್ದ ಪಡಿಕ್ಕಲ್, ದೇಶೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಕ್ನೋ ಫ್ರಾಂಚೈಸಿಯ ಬಲ ಹೆಚ್ಚಿಸಿದ್ದರು. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದರು.
ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಪಡಿಕ್ಕಲ್ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 65 ರನ್ ಕಲೆಹಾಕಿದ್ದರು.
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಮಾಡಿದ್ದರಿಂದ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಆದರೆ ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ಪಡಿಕ್ಕಲ್ ಶೋಚನೀಯವಾಗಿ ವಿಫಲರಾಗಿದ್ದಾರೆ.
ಪಡಿಕ್ಕಲ್ ಎಷ್ಟರ ಮಟ್ಟಿಗೆ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ ಎಂದರೆ, ಆಡಿರುವ 5 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಅವರಿಗೆ ಎರಡಂಕಿಯ ಸ್ಕೋರ್ ಗಳಿಸಲು ಸಾಧ್ಯವಾಗಿಲ್ಲ. ಲಕ್ನೋ ಪರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಪಡಿಕ್ಕಲ್ 5 ಪಂದ್ಯಗಳಲ್ಲಿ ಕೇವಲ 25 ರನ್ ಮಾತ್ರ ಕಲೆಹಾಕಿದ್ದಾರೆ.
ರಾಜಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಔಟಾಗಿದ್ದ ಪಡಿಕ್ಕಲ್, ಪಂಜಾಬ್ ವಿರುದ್ಧ 9, ಆರ್‌ಸಿಬಿ ವಿರುದ್ಧ 6, ಗುಜರಾತ್ ಟೈಟಾನ್ಸ್ ವಿರುದ್ಧ 7 ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಪಡಿಕ್ಕಲ್ 5 ಸರಾಸರಿಯಲ್ಲಿ 25 ರನ್ ಮಾತ್ರ ಕಲೆಹಾಕಿದ್ದಾರೆ.
ಹೀಗಾಗಿ ಕಳಪೆ ಫಾರ್ಮ್ನಿಂದ ಸತತ ವೈಫಲ್ಯ ಬಳಲುತ್ತಿರುವ ದೇವದತ್ ಪಡಿಕ್ಕಲ್ಗೆ ಮುಂದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ತೀರ ಕಡಿಮೆ ಇವೆ. ಇದು ಮುಂಬರುವ ಮೆಗಾ ಹರಾಜಿನಲ್ಲಿ ಪಡಿಕ್ಕಲ್ರನ್ನು ಯಾರು ಖರೀದಿಸದೆ ಇರಬಹುದು.
Published On - 4:57 pm, Sat, 13 April 24