IPL 2024: ಗಾಯವನ್ನು ಮರೆಮಾಚುತ್ತಿದ್ದಾರಾ ಹಾರ್ದಿಕ್ ಪಾಂಡ್ಯ?
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 17ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಇದುವರೆಗೆ 48 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 89 ರನ್ಗಳನ್ನು ನೀಡಿರುವ ಅವರು ಪಡೆದಿರುವುದು ಕೇವಲ 1 ವಿಕೆಟ್ ಮಾತ್ರ. ಅಂದರೆ ಪ್ರತಿ ಓವರ್ಗೆ 11.13 ರ ಸರಾಸರಿಯಲ್ಲಿ ರನ್ ಬಿಟ್ಟು ಕೊಡುವ ಮೂಲಕ ಮುಂಬೈ ಇಂಡಿಯನ್ಸ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದಾರೆ.
Updated on: Apr 13, 2024 | 1:29 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17ರ ಮೂಲಕ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಿರುವ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಮುಂಬೈ ಇಂಡಿಯನ್ಸ್ ತಂಡದ ಕಪ್ತಾನನ ಹೊಸ ನಡೆ.

ಹೌದು, ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲೆರಡು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಇನಿಂಗ್ಸ್ನ ಮೊದಲ ಓವರ್ ಎಸೆದಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಗಳಲ್ಲಿ ಪಾಂಡ್ಯ ಒಂದೇ ಒಂದು ಓವರ್ ಬೌಲಿಂಗ್ ಮಾಡಿರಲಿಲ್ಲ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ ಎಸೆದಿದ್ದು ಕೇವಲ 1 ಓವರ್ ಮಾತ್ರ. ಅಂದರೆ ಮೊದಲ ಎರಡು ಪಂದ್ಯಗಳಲ್ಲಿ ಪೂರ್ಣ ಪ್ರಮಾಣದ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಪಾಂಡ್ಯ ಆ ಬಳಿಕ ಬೌಲಿಂಗ್ ಮಾಡದಿರುವುದು ಹೊಸ ಅನುಮಾನಕ್ಕೆ ಕಾರಣವಾಗಿದೆ.

ಅದರಲ್ಲೂ ಭುಜದ ನೋವಿನ ಕಾರಣ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಹಿಂದೇಟು ಹಾಕುತ್ತಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ಏಕೆಂದರೆ ಈ ಹಿಂದೆ ಕೂಡ ಪಾಂಡ್ಯ ತನ್ನ ತೋಳು ನೋವಿನ ಸಮಸ್ಯೆಯನ್ನು ಮರೆಮಾಚಿ ಟಿ20 ವಿಶ್ವಕಪ್ 2021ರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಬಳಿಕ ಅವರು ಸಂಪೂರ್ಣ 4 ಓವರ್ಗಳನ್ನು ಎಸೆಯಲು ಹಿಂದೇಟು ಹಾಕಿದ್ದರು.

ಇದೀಗ ಮತ್ತೆ ಬೌಲಿಂಗ್ ಮಾಡಲು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಏಕೆಂದರೆ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿ ತಮ್ಮ ಕ್ಷಮತೆಯನ್ನು ಸಾಬೀತುಪಡಿಸಬೇಕಿದೆ. ಆದರೆ ಇತ್ತ 5 ಪಂದ್ಯಗಳಲ್ಲಿ ಪಾಂಡ್ಯ ಎಸೆದಿರುವುದು ಕೇವಲ 8 ಓವರ್ಗಳು ಮಾತ್ರ.

ಇದೀಗ ಅವರು ಫಿಟ್ನೆಸ್ ಸಮಸ್ಯೆಯನ್ನು ಮರೆಮಾಚುವ ಸಲುವಾಗಿಯೇ ಬೌಲಿಂಗ್ನಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಅಪವಾದಗಳು ಕೇಳಿ ಬರುತ್ತಿದೆ. ಈ ಅಪವಾದವನ್ನು ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ಮೂಲಕ ತೊಡೆದು ಹಾಕಲಿದ್ದಾರಾ ಕಾದು ನೋಡಬೇಕಿದೆ.
