
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 (IPL 2024) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 22 ರಿಂದ ಶುರುವಾಗಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಉದ್ಘಾಟನಾ ಪಂದ್ಯವಾಡಿದ ವಿಶೇಷ ದಾಖಲೆಯೊಂದು ಸಿಎಸ್ಕೆ ಪಾಲಾಗಲಿದೆ.

ಅಂದರೆ ಐಪಿಎಲ್ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ ಮೊದಲ ಪಂದ್ಯವಾಡಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿಗೆ ಸೇರ್ಪಡೆಯಾಗಲಿದೆ. ಇಂಟ್ರೆಸ್ಟಿಂಗ್ ವಿಷಯ ಎಂದರೆ, ಐಪಿಎಲ್ನ ಮೂರು ತಂಡಗಳು ಇದುವರೆಗೆ ಉದ್ಘಾಟನಾ ಪಂದ್ಯವನ್ನಾಡಿಲ್ಲ. ಆ ತಂಡಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

ಪಂಜಾಬ್ ಕಿಂಗ್ಸ್: ಐಪಿಎಲ್ ಇತಿಹಾಸದಲ್ಲಿ 16 ಸೀಸನ್ಗಳಲ್ಲಿ ಕಣಕ್ಕಿಳಿದಿರುವ ಪಂಜಾಬ್ ಕಿಂಗ್ಸ್ ತಂಡವು ಒಮ್ಮೆಯೂ ಉದ್ಘಾಟನಾ ಪಂದ್ಯವನ್ನಾಡಿಲ್ಲ. 2014 ರಲ್ಲಿ ಪಂಜಾಬ್ ತಂಡವು ಫೈನಲ್ ಪಂದ್ಯವಾಡಿದ್ದರೂ 2015 ರಲ್ಲಿ ಮೊದಲ ಪಂದ್ಯವನ್ನಾಡಿರಲಿಲ್ಲ ಎಂಬುದು ವಿಶೇಷ.

ರಾಜಸ್ಥಾನ್ ರಾಯಲ್ಸ್: ಐಪಿಎಲ್ನಲ್ಲಿ ಇದುವರೆಗೆ 14 ಸೀಸನ್ಗಳಲ್ಲಿ ಕಾಣಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ 2008 ರಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಹಾಗೆಯೇ 2022 ರಲ್ಲಿ ಫೈನಲ್ ಪಂದ್ಯವನ್ನಾಡಿತ್ತು. ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ತಂಡ ಒಮ್ಮೆಯೂ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.

ಲಕ್ನೋ ಸೂಪರ್ ಜೈಂಟ್ಸ್: 2022ರ ಐಪಿಎಲ್ ಮೂಲಕ ಅಭಿಯಾನ ಆರಂಭಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಕೂಡ ಒಮ್ಮೆಯೂ ಉದ್ಘಾಟನಾ ಪಂದ್ಯವಾಡಿಲ್ಲ. ಈ ಮೂರು ತಂಡಗಳನ್ನು ಹೊರತುಪಡಿಸಿ ಉಳಿದ ತಂಡಗಳು ಐಪಿಎಲ್ ಸೀಸನ್ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಮೊದಲ ಪಂದ್ಯವಾಡಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಕಿಂಗ್ಸ್ ಪಾಲಾಗಲಿದೆ. ಸಿಎಸ್ಕೆ ಇದೀಗ 9ನೇ ಬಾರಿಗೆ ಉದ್ಘಾಟನಾ ಪಂದ್ಯವಾಡಲು ಸಜ್ಜಾಗಿದೆ. ಇನ್ನು ಮುಂಬೈ ಇಂಡಿಯನ್ಸ್ 8 ಬಾರಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 6 ಬಾರಿ ಮೊದಲ ಪಂದ್ಯವನ್ನಾಡಿದೆ.