
ಈ ಬಾರಿಯ ಐಪಿಎಲ್ (IPL 2024) ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಹರ್ಷಲ್ ಪಟೇಲ್ (Harshal Patel) ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 11.75 ಕೋಟಿ ರೂ. ನೀಡಿ ಖರೀದಿಸಿತ್ತು. ಈ ದುಬಾರಿ ಖರೀದಿಯೂ ಇದೀಗ ಪಂಜಾಬ್ ಕಿಂಗ್ಸ್ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ. ಇದಕ್ಕೆ ಸಾಕ್ಷಿಯೇ ಕಳೆದ ಮೂರು ಪಂದ್ಯಗಳಲ್ಲಿನ ಹರ್ಷಲ್ ಅವರ ಪ್ರದರ್ಶನ.

ಟೀಮ್ ಇಂಡಿಯಾ ವೇಗಿಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಪಂಜಾಬ್ ಕಿಂಗ್ಸ್ ಪಾಲಿಗೆ ಹರ್ಷಲ್ ಪಂದ್ಯದಿಂದ ಪಂದ್ಯಕ್ಕೆ ದುಬಾರಿಯಾಗುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 4 ಓವರ್ ಎಸೆದಿದ್ದ ಹರ್ಷಲ್ ನೀಡಿದ್ದು ಬರೋಬ್ಬರಿ 47 ರನ್ಗಳು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್ಗಳಲ್ಲಿ 45 ರನ್ಗಳು ಬಿಟ್ಟುಕೊಟ್ಟಿದ್ದರು. ಇದುವೇ ಆರ್ಸಿಬಿ ವಿರುದ್ಧ ಪಂಜಾಬ್ ತಂಡದ ಸೋಲಿಗೆ ಕಾರಣವಾಗಿತ್ತು.

ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 45 ರನ್ ನೀಡಿದ್ದಾರೆ. ಡೆತ್ ಓವರ್ಗಳ ವೇಳೆ ಹೆಚ್ಚಿನ ರನ್ ನೀಡುವ ಮೂಲಕ ಮತ್ತೊಮ್ಮೆ ಹರ್ಷಲ್ ಪಟೇಲ್ ಪಂಜಾಬ್ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದಾರೆ.

ಈ ಮೂಲಕ ಕೇವಲ ಮೂರು ಪಂದ್ಯಗಳಲ್ಲೇ ಹರ್ಷಲ್ ಪಟೇಲ್ 137 ರನ್ ಬಿಟ್ಟುಕೊಟ್ಟಿದ್ದಾರೆ. ಅಂದರೆ ಪಂಜಾಬ್ ಕಿಂಗ್ಸ್ ತಂಡದ ಇತರೆ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರೂ ಹರ್ಷಲ್ ಪಟೇಲ್ ಮಾತ್ರ ಪ್ರತಿ ಪಂದ್ಯದಲ್ಲೂ 10 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ನೀಡುತ್ತಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಸೋಲಿಗೆ ಕಾರಣವಾಗುತ್ತಿದ್ದಾರೆ.

ಅಂದಹಾಗೆ ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡದಲ್ಲಿದ್ದ ಹರ್ಷಲ್ ಪಟೇಲ್ 13 ಪಂದ್ಯಗಳಲ್ಲಿ ಪ್ರತಿ ಓವರ್ಗೆ 9.66 ರ ಸರಾಸರಿಯಲ್ಲಿ ರನ್ ನೀಡಿದ್ದರು. ಇದೇ ಕಾರಣದಿಂದಾಗಿ ಆರ್ಸಿಬಿ ಅವರನ್ನು ಬಿಡುಗಡೆ ಮಾಡಿತ್ತು. ಆದರೆ ಆರ್ಸಿಬಿ ಕೈಬಿಟ್ಟ ಬೆನ್ನಲ್ಲೇ 11.75 ಕೋಟಿ ರೂ. ನೀಡಿ ಖರೀದಿಸಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಇದೀಗ ಸಂಕಷ್ಟಕ್ಕೆ ಸಿಲುಕಿದೆ.