ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ನ (IPL 2024) 42ನೇ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ (Punjab Kings) ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಕೆಕೆಆರ್ ನೀಡಿದ 262 ರನ್ಗಳ ಗುರಿಯನ್ನು ಬೆನ್ನತ್ತುವ ಮೂಲಕ ಪಂಜಾಬ್ ಕಿಂಗ್ಸ್ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಐತಿಹಾಸಿಕ ಚೇಸಿಂಗ್ನಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳು ಸಿಡಿಸಿರುವುದು ಬರೋಬ್ಬರಿ 24 ಸಿಕ್ಸ್ಗಳು ಎಂದರೆ ನಂಬಲೇಬೇಕು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಪಂಜಾಬ್ ಕಿಂಗ್ಸ್ ಪಾಲಾಗಿದೆ.
ಇದಕ್ಕೂ ಮುನ್ನ ಈ ದಾಖಲೆ ಸನ್ರೈಸರ್ಸ್ ಹೈದರಾಬಾದ್ ತಂಡದ ಹೆಸರಿನಲ್ಲಿತ್ತು. ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡವು ಒಂದೇ ಇನಿಂಗ್ಸ್ನಲ್ಲಿ 22 ಸಿಕ್ಸ್ ಸಿಡಿಸಿ ಹೊಸ ಇತಿಹಾಸ ಬರೆದಿತ್ತು.
ಇದೀಗ 24 ಭರ್ಜರಿ ಸಿಕ್ಸ್ಗಳೊಂದಿಗೆ ಈ ದಾಖಲೆಯನ್ನು ಮುರಿಯುವಲ್ಲಿ ಪಂಜಾಬ್ ಕಿಂಗ್ಸ್ ತಂಡ ಯಶಸ್ವಿಯಾಗಿದೆ. ಪಂಜಾಬ್ ಪರ ಆರಂಭಿಕರಾದ ಪ್ರಭ್ಸಿಮ್ರಾನ್ ಸಿಂಗ್ 5 ಸಿಕ್ಸ್ ಬಾರಿಸಿದರೆ, ಜಾನಿ ಬೈರ್ಸ್ಟೋವ್ 9 ಸಿಕ್ಸ್ ಸಿಡಿಸಿದ್ದರು. ಇನ್ನು ರೈಲಿ ರೊಸ್ಸೊ 2 ಹಾಗೂ ಶಶಾಂಕ್ ಸಿಂಗ್ 8 ಸಿಕ್ಸ್ ಸಿಡಿಸಿ ಈ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಇನ್ನು ಟಿ20 ಕ್ರಿಕೆಟ್ನಲ್ಲಿ ಒಂದೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ನೇಪಾಳ ತಂಡದ ಹೆಸರಿನಲ್ಲಿದೆ. ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡ ಒಟ್ಟು 26 ಸಿಕ್ಸ್ಗಳನ್ನು ಸಿಡಿಸಿ ಈ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದೀಗ 24 ಸಿಕ್ಸ್ಗಳೊಂದಿಗೆ ಪಂಜಾಬ್ ಕಿಂಗ್ಸ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.