
ಐಪಿಎಲ್ನ (IPL 2024) 54ನೇ ಪಂದ್ಯದ ಮೂಲಕ ರವೀಂದ್ರ ಜಡೇಜಾ (Ravindra Jadeja) ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ (MS Dhoni) ವಿಶೇಷ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ತಂಡವು 28 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದ ಗೆಲುವಿನ ರೂವಾರಿ ರವೀಂದ್ರ ಜಡೇಜಾ. ಬ್ಯಾಟಿಂಗ್ನಲ್ಲಿ 43 ರನ್ಗಳ ಕೊಡುಗೆ ನೀಡಿದ್ದ ಜಡೇಜಾ, ಬೌಲಿಂಗ್ನಲ್ಲಿ 4 ಓವರ್ಗಳಲ್ಲಿ ಕೇವಲ 20 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

ಈ ಅದ್ಭುತ ಆಲ್ರೌಂಡರ್ ಪ್ರದರ್ಶನದ ಫಲವಾಗಿ ರವೀಂದ್ರ ಜಡೇಜಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಇದರೊಂದಿಗೆ ಧೋನಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದು ಜಡೇಜಾ ಪಾಲಾಯಿತು. ಅಂದರೆ ಸಿಎಸ್ಕೆ ಪರ ಅತ್ಯಧಿಕ ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಟಗಾರನಾಗಿ ರವೀಂದ್ರ ಜಡೇಜಾ ಹೊರಹೊಮ್ಮಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಸಿಎಸ್ಕೆ ಪರ 255 ಪಂದ್ಯಗಳನ್ನಾಡಿರುವ ಧೋನಿ ಒಟ್ಟು 15 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಈ ದಾಖಲೆಯನ್ನು ಜಡೇಜಾ ಮುರಿದಿದ್ದಾರೆ.

ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಪರ 183 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 16 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಸಿಎಸ್ಕೆ ಪರ ಅತೀ ಹೆಚ್ಚು ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದ ಆಟಗಾರ ಎಂಬ ಹೆಗ್ಗಳಿಕೆಗೆ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ.