
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 36ನೇ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತು. ಅದರಲ್ಲೂ ಕೊನೆಯ ಎಸೆತದಲ್ಲಿ ಆರ್ಸಿಬಿ ತಂಡಕ್ಕೆ 2 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ 2 ರನ್ ಓಡುವ ಪ್ರಯತ್ನದಲ್ಲಿ ಲಾಕಿ ಫರ್ಗುಸನ್ ರನೌಟ್ ಆದರು. ಈ ಮೂಲಕ ಆರ್ಸಿಬಿ 1 ರನ್ಗಳ ವಿರೋಚಿತ ಸೋಲನುಭವಿಸಿತು.

ಈ ವಿರೋಚಿತ ಸೋಲಿನೊಂದಿಗೆ ಆರ್ಸಿಬಿ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಅಂದರೆ ಈ ಪಂದ್ಯದಲ್ಲಿ ಆರ್ಸಿಬಿ ತಂಡವು ಕೊನೆಯ ಎಸೆತದಲ್ಲಿ ಆಲೌಟ್ ಆಗಿತ್ತು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಆಲೌಟ್ ಆಗಿ ಅತ್ಯಧಿಕ ರನ್ ಪೇರಿಸಿದ ತಂಡ ಎಂಬ ಹೆಗ್ಗಳಿಕೆಗೆ ಆರ್ಸಿಬಿ ಪಾತ್ರವಾಗಿದೆ.

ಇದಕ್ಕೂ ಮುನ್ನ ಆಲೌಟ್ ಆಗಿ ಅತೀ ಹೆಚ್ಚು ರನ್ ಪೇರಿಸಿದ ವಿಶ್ವ ದಾಖಲೆ ಶ್ರೀಲಂಕಾದ ಎಸ್ಎಲ್ ಆರ್ಮಿ ತಂಡದ ಹೆಸರಿನಲ್ಲಿತ್ತು. 2018 ರಲ್ಲಿ ನೆಗಾಂಬೊ ಸಿಸಿ ತಂಡದ ವಿರುದ್ಧ 218 ರನ್ಗಳಿಸಿ ಆಲೌಟ್ ಆಗುವ ಮೂಲಕ ಎಸ್ಎಲ್ ಆರ್ಮಿ ಟಿ20 ಕ್ರಿಕೆಟ್ನಲ್ಲಿ ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.

ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 221 ರನ್ ಬಾರಿಸಿ ಆರ್ಸಿಬಿ ಆಲೌಟ್ ಆಗಿ ಈ ದಾಖಲೆಯನ್ನು ಮುರಿದಿದೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಆಲೌಟ್ ಆಗುವುದರೊಂದಿಗೆ ಅತ್ಯಧಿಕ ರನ್ ಕಲೆಹಾಕಿದ ತಂಡವೆಂಬ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾತ್ರವಾಗಿದೆ.
Published On - 7:33 am, Mon, 22 April 24