- TV9 Kannada Kannada News Photos Cricket Photos IPL 2024 Virat Kohli sets new world record in T20 cricket
IPL 2024: ವಿವಾದಿತ ತೀರ್ಪಿಗೆ ಬಲಿಯಾದರೂ ವಿಶ್ವದಾಖಲೆ ಬರೆದ ಕೊಹ್ಲಿ..!
IPL 2024 Virat Kohli: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಆರಂಭದ ಹೊರತಾಗಿಯೂ ವಿವಾದಿತ ತೀರ್ಪಿನಿಂದಾಗಿ ಕೊಹ್ಲಿ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು. ಆದರೂ ಕೊಹ್ಲಿ ತಮ್ಮ ಅಲ್ಪ ಇನ್ನಿಂಗ್ಸ್ನಲ್ಲಿ 2 ಸಿಕ್ಸರ್ ಬಾರಿಸುವ ಮೂಲಕ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.
Updated on: Apr 21, 2024 | 10:37 PM

ಕೋಲ್ಕತ್ತಾ ನೈಟ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ 1 ರನ್ಗಳ ಸೋಲಿನೊಂದಿಗೆ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7ನೇ ಸೋಲು ಅನುಭವಿಸಿದ್ದಂತ್ತಾಗಿದೆ. ಇದರೊಂದಿಗೆ ಆರ್ಸಿಬಿಯ ಪ್ಲೇಆಫ್ ಕನಸು ಭಗ್ನಗೊಂಡಿದೆ.

ಅದಾಗ್ಯೂ ತಂಡದ ಪರ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಆರೆಂಜ್ ಕ್ಯಾಪನ್ನು ತನ್ನಲ್ಲೇ ಉಳಿಸಿಕೊಂಡಿರುವ ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಟಿ20 ಮಾದರಿಯಲ್ಲಿ ಇದುವರೆಗೆ ಯಾವ ಆಟಗಾರನು ಮಾಡದ ದಾಖಲೆಯನ್ನು ನಿರ್ಮಿಸಿದ್ದಾರೆ.

ವಾಸ್ತವವಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಆರಂಭದ ಹೊರತಾಗಿಯೂ ವಿವಾದಿತ ತೀರ್ಪಿನಿಂದಾಗಿ ಕೊಹ್ಲಿ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು. ಆದರೂ ಕೊಹ್ಲಿ ತಮ್ಮ ಅಲ್ಪ ಇನ್ನಿಂಗ್ಸ್ನಲ್ಲಿ 2 ಸಿಕ್ಸರ್ ಬಾರಿಸುವ ಮೂಲಕ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ 7 ಎಸೆತಗಳನ್ನು ಎದುರಿಸಿದ ಕೊಹ್ಲಿ 18 ರನ್ ಬಾರಿಸಿದರು. ಇದರಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು. ಈ ಎರಡು ಸಿಕ್ಸರ್ಗಳೊಂದಿಗೆ ಕೊಹ್ಲಿ ಐಪಿಎಲ್‌ನಲ್ಲಿ 250 ಸಿಕ್ಸರ್ಗಳ ಗಡಿ ಕೂಡ ಮುಟ್ಟಿದರು. ಅಲ್ಲದೆ ಒಂದು ತಂಡದ ಪರವಾಗಿ ಅಧಿಕ ಸಿಕ್ಸರ್ ಸಿಡಿಸಿದ ವಿಶ್ವದಾಖಲೆಯನ್ನು ನಿರ್ಮಿಸಿದರು.

ಇದುವರೆಗೆ ಕೊಹ್ಲಿನ ಆರ್ಸಿಬಿ ಪರ 264 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಐಪಿಎಲ್‌ನಲ್ಲಿ ಮಾತ್ರ ಕೊಹ್ಲಿ ಬ್ಯಾಟ್ನಿಂದ 250 ಸಿಕ್ಸರ್ಗಳು ಸಿಡಿಸಿದ್ದರೆ, ಉಳಿದ 14 ಸಿಕ್ಸರ್‌ಗಳನ್ನು ಆರ್ಸಿಬಿ ಪರವಾಗಿಯೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾರಿಸಿದ್ದಾರೆ.

ಇದರೊಂದಿಗೆ ಕೊಹ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ ಪರ 264 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಇದುವರೆಗೆ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರ ಒಂದು ತಂಡದ ಪರ ಇಷ್ಟು ಸಿಕ್ಸರ್ ಬಾರಿಸಿಲ್ಲ.

ಇದಲ್ಲದೆ ಕೇವಲ ಐಪಿಎಲ್‌ನಲ್ಲಿ ಮಾತ್ರ 250 ಸಿಕ್ಸರ್‌ಗಳನ್ನು ಪೂರೈಸುವ ಮೂಲಕ ಕೊಹ್ಲಿ, ಐಪಿಎಲ್‌ನಲ್ಲಿ 250 ಸಿಕ್ಸರ್‌ಗಳನ್ನು ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕ್ರಿಸ್ ಗೇಲ್, ರೋಹಿತ್ ಶರ್ಮಾ ಮತ್ತು ಎಬಿ ಡಿವಿಲಿಯರ್ಸ್ ಈ ಸಾಧನೆ ಮಾಡಿದ್ದರು.

ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 357 ಸಿಕ್ಸರ್ ಸಿಡಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 275 ಸಿಕ್ಸರ್ ಸಿಡಿಸಿರುವ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 251 ಸಿಕ್ಸರ್‌ಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



