
ಐಪಿಎಲ್ನ (IPL 2024) 68ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಲಿದೆ. ಪ್ಲೇಆಫ್ ಪ್ರವೇಶಿಸಲು ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸಲಿದೆ. ಏಕೆಂದರೆ ಇಂದಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಅತ್ತ ಆರ್ಸಿಬಿ ತಂಡಕ್ಕೆ ಗೆಲುವಿನೊಂದಿಗೆ ನೆಟ್ ರನ್ ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕಿದೆ.

ಅಂದರೆ ಈ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿ ಕನಿಷ್ಠ 18 ರನ್ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಆರ್ಸಿಬಿ ದ್ವಿತೀಯ ಇನಿಂಗ್ಸ್ ಆಡಿದರೆ ಸಿಎಸ್ಕೆ ನೀಡುವ ಗುರಿಯನ್ನು 18.1 ಓವರ್ಗಳಲ್ಲಿ ಚೇಸ್ ಮಾಡಬೇಕು. ಹೀಗಾದಲ್ಲಿ ಮಾತ್ರ ಸಿಎಸ್ಕೆ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿ ಆರ್ಸಿಬಿಗೆ ಪ್ಲೇಆಫ್ಗೆ ಎಂಟ್ರಿ ಕೊಡಬಹುದು.

ಇಲ್ಲಿ ಆರ್ಸಿಬಿ ವಿಶೇಷ ತಂತ್ರ ರೂಪಿಸಲು ಟಾಸ್ ಗೆಲುವು ಕೂಡ ಅನಿವಾರ್ಯ. ಏಕೆಂದರೆ ಈ ಪಂದ್ಯದ ವೇಳೆ ಮಳೆ ಬಂದರೆ ಓವರ್ಗಳ ಕಡಿತವಾಗುತ್ತದೆ. ಇದರಿಂದ ಆರ್ಸಿಬಿ ತಂಡದ ಲೆಕ್ಕಾಚಾರಗಳು ಕೂಡ ತಲೆ ಕೆಳಗಾಗಬಹುದು. ಅಂದರೆ ಇಲ್ಲಿ ಮಳೆ ಬರುವುದಿಲ್ಲ ಎಂದು ಕಂಡು ಬಂದರೆ ಆರ್ಸಿಬಿ ತಂಡ ಬೌಲಿಂಗ್ ಆಯ್ದುಕೊಳ್ಳುವುದು ಉತ್ತಮ.

ಏಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಚೇಸಿಂಗ್ ಮಾಡಲು ಸಹಕಾರಿ. ಅದೇ ಮಳೆಯ ಬರುವ ಸಾಧ್ಯತೆಗಳಿದ್ದರೆ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಾಗುತ್ತದೆ. ಏಕೆಂದರೆ ಆರ್ಸಿಬಿ ಮೊದಲ ಇನಿಂಗ್ಸ್ನಲ್ಲಿ 20 ಓವರ್ಗಳನ್ನು ಆಡುವ ಅವಕಾಶ ಪಡೆಯಬಹುದು. ಈ ಮೂಲಕ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತದೆ.

ಈ ಮೊತ್ತವನ್ನು ಬೆನ್ನತ್ತುವ ವೇಳೆ ಮಳೆ ಬಂದರೂ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸಿಎಸ್ಕೆ ತಂಡಕ್ಕೆ ಕಠಿಣ ಗುರಿ ಸಿಗಲಿದೆ. ಇದೇ ವೇಳೆ ಆರ್ಸಿಬಿ 18 ರನ್ಗಳ ಅಂತರದಿಂದ ಜಯ ಸಾಧಿಸಿ ಪ್ಲೇಆಫ್ಗೆ ಎಂಟ್ರಿ ಕೊಡಬಹುದು.

ಒಂದು ವೇಳೆ ಆರ್ಸಿಬಿ ಚೇಸಿಂಗ್ ಮಾಡುವುದಾದರೆ ಲೆಕ್ಕಾಚಾರಗಳು ಬದಲಾಗಲಿದೆ. ಏಕೆಂದರೆ, ಸಿಎಸ್ಕೆ ತಂಡವು ಮೊದಲು ಬ್ಯಾಟ್ ಮಾಡಿ 201 ರನ್ ಕಲೆಹಾಕಿದರೆ ಆರ್ಸಿಬಿ ತಂಡವು ಇದನ್ನು 18.1 ಓವರ್ಗಳಲ್ಲಿ ಚೇಸ್ ಮಾಡಬೇಕು. ಒಂದು ವೇಳೆ ಮಳೆ ಬಂದು ಓವರ್ಗಳ ಕಡಿತವಾದರೂ ಆರ್ಸಿಬಿ ತಂಡದ ರನ್ ಗುರಿಯಲ್ಲಿ ಅಂತಹ ದೊಡ್ಡ ವ್ಯತ್ಯಾಸವಾಗುವುದಿಲ್ಲ.

ಸಿಎಸ್ಕೆ ತಂಡ 201 ರನ್ಗಳ ಟಾರ್ಗೆಟ್ ನೀಡಿದ ಬಳಿಕ ಮಳೆ ಬಂದು 19 ಓವರ್ಗಳ ಪಂದ್ಯ ನಡೆದರೆ ಆರ್ಸಿಬಿ ಈ ಗುರಿಯನ್ನು 17.1 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಇನ್ನು 15 ಓವರ್ಗಳ ಪಂದ್ಯ ನಡೆದರೆ ಆರ್ಸಿಬಿ 13.1 ಓವರ್ಗಳಲ್ಲಿ ಸಿಎಸ್ಕೆ ತಂಡದ ಗುರಿಯನ್ನು ಬೆನ್ನತ್ತಬೇಕಾಗುತ್ತದೆ. ಅಂದರೆ ಇಲ್ಲಿ ಓವರ್ಗಳ ಕಡಿತವಾದರೂ ಆರ್ಸಿಬಿ 11 ಎಸೆತಗಳು ಬಾಕಿಯಿರುವಂತೆಯೇ ಗುರಿ ತಲುಪಬೇಕಾಗುತ್ತದೆ.

ಹೀಗಾಗಿ ಈ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆಲ್ಲುವುದು ಕೂಡ ಅನಿವಾರ್ಯ. ಈ ಮೂಲಕ ಮಳೆಯ ಬರುವ ಸಾಧ್ಯತೆಗಳಿದ್ದರೆ ಬ್ಯಾಟಿಂಗ್ ಆಯ್ದುಕೊಳ್ಳಬೇಕು. ಅಲ್ಲದೆ ಬೃಹತ್ ಮೊತ್ತ ಪೇರಿಸಿ ಸಿಎಸ್ಕೆ ತಂಡವನ್ನು ಕನಿಷ್ಠ 18 ರನ್ಗಳಿಂದ ಸೋಲಿಸಿ ಪ್ಲೇಆಫ್ಗೆ ಅರ್ಹತೆ ಗಿಟ್ಟಿಸಿಕೊಳ್ಳಬಹುದು. ಇನ್ನು ಮಳೆ ಬರುವ ಸಾಧ್ಯತೆಗಳಿಲ್ಲದಿದ್ದರೆ, ಚೇಸಿಂಗ್ ಮಾಡುವುದು ಉತ್ತಮ. ಈ ಮೂಲಕ ಸಿಎಸ್ಕೆ ನೀಡುವ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆ ಚೇಸ್ ಮಾಡಿ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೆ ಪ್ರವೇಶಿಸಬಹುದು.
Published On - 8:51 am, Sat, 18 May 24