
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈವರೆಗೆ ಮೂರು ಪಂದ್ಯಗಳನ್ನಾಡಿದೆ. ಈ ಮೂರು ಪಂದ್ಯಗಳಲ್ಲಿ ಒಂದು ಮ್ಯಾಚ್ನಲ್ಲಿ ಜಯ ಸಾಧಿಸಿದರೆ, 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಸೋಲುಗಳಿಗೆ ಪ್ರಮುಖ ಕಾರಣ ಆರ್ಸಿಬಿ ತಂಡದ ಬೌಲರ್ಗಳು ಎಂದರೆ ತಪ್ಪಾಗಲಾರದು.

ಅದರಲ್ಲೂ ಆರ್ಸಿಬಿ ತಂಡದ ವೇಗಿ ಅಲ್ಝಾರಿ ಜೋಸೆಫ್ ಕೇವಲ ಮೂರು ಪಂದ್ಯಗಳಲ್ಲೇ 100 ಕ್ಕಿಂತ ಅಧಿಕ ರನ್ ಬಿಟ್ಟುಕೊಟ್ಟಿದ್ದಾರೆ. ಸಿಎಸ್ಕೆ ವಿರುದ್ಧದ ಮೊದಲ ಪಂದ್ಯದಲ್ಲಿ 3.4 ಓವರ್ ಬೌಲಿಂಗ್ ಮಾಡಿದ್ದ ಅಲ್ಝಾರಿ 38 ರನ್ ನೀಡಿದ್ದರು. ಆದರೆ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.

ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧದ 2ನೇ ಪಂದ್ಯದಲ್ಲಿ ಆರ್ಸಿಬಿ ತಂಡ ಜಯ ಸಾಧಿಸಿದರೂ, ಅಲ್ಝಾರಿ ಜೋಸೆಫ್ ಮಿಂಚಿನ ದಾಳಿ ಸಂಘಟಿಸುವಲ್ಲಿ ವಿಫಲರಾಗಿದ್ದರು. ಈ ಪಂದ್ಯದಲ್ಲಿ ನಾಲ್ಕು ಓವರ್ ಎಸೆದಿದ್ದ ಅಲ್ಝಾರಿ 43 ರನ್ ನೀಡಿ 1 ವಿಕೆಟ್ ಕಬಲಿಸಲಷ್ಟೇ ಶಕ್ತರಾಗಿದ್ದರು.

ಹಾಗೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅಲ್ಝಾರಿ ಜೋಸೆಫ್ 2 ಓವರ್ಗಳನ್ನು ಮಾತ್ರ ಎಸೆದಿದ್ದರು. ಈ 12 ಎಸೆತಗಳಲ್ಲಿ ನೀಡಿದ್ದು ಬರೋಬ್ಬರಿ 34 ರನ್ಗಳು.

ಹೀಗೆ ಮೂರು ಪಂದ್ಯಗಳಲ್ಲಿ 9.4 ಓವರ್ಗಳನ್ನು ಎಸೆದಿರುವ ಅಲ್ಝಾರಿ ಜೋಸೆಫ್ ಒಟ್ಟು 115 ರನ್ಗಳನ್ನು ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ವಿಂಡೀಸ್ ವೇಗಿಯನ್ನು ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡುವ ಸಾಧ್ಯತೆಯಿದೆ.

RCB ತಂಡವು ತನ್ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಆರ್ಸಿಬಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.