
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರ ದ್ವಿತೀಯಾರ್ಧದ ಪಂದ್ಯಗಳನ್ನು ಯುಎಇ ಗೆ ಸ್ಥಳಾಂತರಿಸಲಾಗುತ್ತದೆ ಎಂದು ವರದಿಯಾಗಿದೆ. ಇದಾಗ್ಯೂ ಮೊದಲಾರ್ಧದ 21 ಪಂದ್ಯಗಳು ಭಾರತದಲ್ಲೇ ಜರುಗಲಿದೆ.

ಈಗಾಗಲೇ 21 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಮಾರ್ಚ್ 22 ರಿಂದ ಟೂರ್ನಿ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಏಪ್ರಿಲ್ 7 ರ ತನಕ ಭಾರತದಲ್ಲೇ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಉಳಿದ ಪಂದ್ಯಗಳನ್ನು ಯುಎಇ ನಲ್ಲಿ ನಡೆಸಲು ಚಿಂತಿಸಲಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು ಯುಎಇ ಕ್ರಿಕೆಟ್ ಬೋರ್ಡ್ ಜೊತೆ ಚರ್ಚಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಲೋಕಸಭಾ ಚುನಾವಣೆಯ ದಿನಾಂಕ ಶನಿವಾರ ಘೋಷಣೆಯಾಗಲಿದ್ದು, ಇದಾದ ಬಳಿಕ ಚುನಾವಣಾ ದಿನಾಂಕ ಮತ್ತು ಐಪಿಎಲ್ ವೇಳಾಪಟ್ಟಿಯನ್ನು ಪರಿಶೀಲಿಸಿ, ಟೂರ್ನಿಯನ್ನು ವಿದೇಶಕ್ಕೆ ಶಿಫ್ಟ್ ಮಾಡಬೇಕಾ ಎಂಬುದರ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಐಪಿಎಲ್ ಶಿಫ್ಟ್ ಯಾಕೆ?: ದೇಶದದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾದರೆ ಸರ್ಕಾರವು ಐಪಿಎಲ್ಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಈ ಹಿಂದೆ 2009 ಹಾಗೂ 2014 ರಲ್ಲಿ ಇದೇ ಕಾರಣಗಳಿಗಾಗಿ ಐಪಿಎಲ್ ಅನ್ನು ವಿದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೊಮ್ಮೆ ಐಪಿಎಲ್ ಅನ್ನು ವಿದೇಶದಲ್ಲಿ ಆಯೋಜಿಸುವ ಅನಿವಾರ್ಯತೆ ಬಿಸಿಸಿಐ ಮುಂದಿದೆ.

2014ರಲ್ಲಿ ಲೋಕಸಭಾ ಚುನಾವಣಾ ನಿಮಿತ್ತ ಐಪಿಎಲ್ನ 20 ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ 2009 ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸಂಪೂರ್ಣ ಟೂರ್ನಿಯನ್ನು ಸೌತ್ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಇದೀಗ ಮೂರನೇ ಬಾರಿ ಚುನಾವಣಾ ನಿಮಿತ್ತ ಐಪಿಎಲ್ನ ಕೆಲ ಪಂದ್ಯಗಳು ವಿದೇಶಕ್ಕೆ ಶಿಫ್ಟ್ ಆಗುವ ಸಾಧ್ಯತೆ ಹೆಚ್ಚಿದೆ.