IPL 2024: RCB ವಿರುದ್ಧ ಅಬ್ಬರಿಸುವ ಶಿವಂ ದುಬೆ: ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು
TV9 Web | Updated By: ಝಾಹಿರ್ ಯೂಸುಫ್
Updated on:
Mar 23, 2024 | 1:15 PM
IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಶಿವಂ ದುಬೆ ಆರ್ಸಿಬಿ ವಿರುದ್ಧ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದೀಗ ಈ ಬಾರಿಯ ಐಪಿಎಲ್ನಲ್ಲೂ ಅದು ಮುಂದುವರೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರ ಮೊದಲ ಪಂದ್ಯದಲ್ಲೇ ಆರ್ಸಿಬಿ ವಿರುದ್ಧ ಸೆಟೆದು ನಿಲ್ಲುವ ಮೂಲಕ ದುಬೆ ತಮ್ಮ ಫಾರ್ಮ್ ಪ್ರದರ್ಶಿಸಿದ್ದಾರೆ.
1 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ಹೊರಹೋದ ಆಟಗಾರರು ಆರ್ಸಿಬಿ ವಿರುದ್ಧ ಅಬ್ಬರಿಸುತ್ತಾರೆಂಬ ಮಾತಿದೆ. ಈ ಮಾತಿಗೆ ಸಾಕ್ಷಿಯಾಗಿ ನಿಂತಿದ್ದಾರೆ ಶಿವಂ ದುಬೆ (Shivam Dube). ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದ ಬಳಿಕ ದುಬೆ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಆರ್ಸಿಬಿ ವಿರುದ್ಧವೇ ಅಬ್ಬರಿಸುತ್ತಿದ್ದಾರೆ.
2 / 6
ಶಿವಂ ದುಬೆಯನ್ನು ಐಪಿಎಲ್ಗೆ ಪರಿಚಯಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. 2019 ರಲ್ಲಿ ಆರ್ಸಿಬಿ ದುಬೆಯನ್ನು 5 ಕೋಟಿ ರೂ. ನೀಡಿ ಖರೀದಿಸಿತ್ತು. ಅದರಂತೆ 2019 ಮತ್ತು 2020 ರಲ್ಲಿ ಆರ್ಸಿಬಿ ಪರ 15 ಪಂದ್ಯಗಳನ್ನಾಡಿದ್ದ ಶಿವಂ ದುಬೆ ಕೇವಲ 169 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
3 / 6
ಆ ಬಳಿಕ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ದುಬೆ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಇದೀಗ ಸಿಎಸ್ಕೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ದುಬೆ ಕಡೆಯಿಂದ ಭರ್ಜರಿ ಪ್ರದರ್ಶನ ಮೂಡಿಬರುತ್ತಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
4 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದ ಬಳಿಕ ಆರ್ಸಿಬಿ ವಿರುದ್ಧ ಶಿವಂ ದುಬೆ ಇದುವರೆಗೆ 4 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಂದು ಪಂದ್ಯದಲ್ಲಿ 32 ಎಸೆತಗಳಲ್ಲಿ 46 ರನ್ ಬಾರಿಸಿದರೆ, ಮತ್ತೊಂದು ಪಂದ್ಯದಲ್ಲಿ 46 ಎಸೆತಗಳಲ್ಲಿ ಅಜೇಯ 95 ರನ್ ಚಚ್ಚಿದ್ದರು. ಇನ್ನು ಮೂರನೇ ಪಂದ್ಯದಲ್ಲಿ 27 ಎಸೆತಗಳಲ್ಲಿ 52 ರನ್ ಬಾರಿಸಿದ್ದರು.
5 / 6
ಇದೀಗ ಐಪಿಎಲ್ 2024 ರ ಮೊದಲ ಪಂದ್ಯದಲ್ಲೂ 28 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 34 ರನ್ ಬಾರಿಸಿದ್ದಾರೆ. ಅಂದರೆ ಆರ್ಸಿಬಿ ವಿರುದ್ಧದ 4 ಪಂದ್ಯಗಳಿಂದ ಶಿವಂ ದುಬೆ ಒಟ್ಟು 227 ರನ್ ಕಲೆಹಾಕಿದ್ದಾರೆ. ಅದು ಕೂಡ 170.68 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ.
6 / 6
ಅಂದರೆ ಆರ್ಸಿಬಿ ಪಾಲಿಗೆ ಮಾಜಿ ಆಟಗಾರ ಕಂಟಕವಾಗಿ ಪರಿಣಮಿಸುತ್ತಿರುವುದಂತು ಸತ್ಯ. ಇದಕ್ಕೆ ಸಾಕ್ಷಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶಿವಂ ದುಬೆ 113.50 ಸರಾಸರಿಯಲ್ಲಿ ರನ್ ಕಲೆಹಾಕಿರುವುದು.
Published On - 11:59 am, Sat, 23 March 24