
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 35ನೇ ಪಂದ್ಯದಲ್ಲಿ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿ ಸನ್ರೈಸರ್ಸ್ ಹೈದರಾಬಾದ್ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಎಸ್ಆರ್ಹೆಚ್ ತಂಡಕ್ಕೆ ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ಒದಗಿಸಿದ್ದರು.

ಮೊದಲ ಓವರ್ನಲ್ಲಿ 19 ರನ್ ಸಿಡಿಸಿದ ಜೋಡಿ, 2ನೇ ಓವರ್ನಲ್ಲಿ ಕಲೆಹಾಕಿದ್ದು 21 ರನ್ಗಳು. ಇನ್ನು 3ನೇ 22 ರನ್ ಚಚ್ಚುವ ಮೂಲಕ 60 ರನ್ಗಳ ಗಡಿದಾಟಿಸಿದರು. ಹಾಗೆಯೇ ಓವರ್ನಲ್ಲಿ 21 ರನ್ ಹಾಗೂ 5ನೇ ಓವರ್ನಲ್ಲಿ 20 ರನ್ ಸಿಡಿಸಿದರು.

ಈ ಮೂಲಕ ಕೇವಲ 5 ಓವರ್ಗಳಲ್ಲಿ ತಂಡದ ಮೊತ್ತವನ್ನು 103 ಕ್ಕೆ ತಂದು ನಿಲ್ಲಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಮೂಡಿಬಂದ ಅತ್ಯಂತ ವೇಗದ ಶತಕ ಎಂಬುದು ವಿಶೇಷ. ಅಂದರೆ ಐಪಿಎಲ್ನಲ್ಲಿ 5 ಓವರ್ಗಳಲ್ಲಿ ಶತಕ ಪೂರೈಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದೆ.

ಹಾಗೆಯೇ ಪವರ್ಪ್ಲೇನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ದಾಖಲೆಯನ್ನು ಕೂಡ ಸನ್ರೈಸರ್ಸ್ ಹೈದರಾಬಾದ್ ನಿರ್ಮಿಸಿದೆ. ಇದಕ್ಕೂ ಮುನ್ನ ಈ ದಾಖಲೆ ನಾಟಿಂಗ್ಹ್ಯಾಮ್ಶೈರ್ ತಂಡದ ಹೆಸರಿನಲ್ಲಿತ್ತು. 2017 ರಲ್ಲಿ ಡರ್ಹಾಮ್ ವಿರುದ್ಧ ನಾಟಿಂಗ್ಹ್ಯಾಮ್ಶೈರ್ 6 ಓವರ್ಗಳಲ್ಲಿ 106 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಎಸ್ಆರ್ಹೆಚ್ ಬ್ಯಾಟರ್ಗಳು ಉಡೀಸ್ ಮಾಡಿದ್ದಾರೆ.

ಇದೀಗ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಅಬ್ಬರದೊಂದಿಗೆ ಪವರ್ಪ್ಲೇನಲ್ಲಿ 125 ರನ್ ಬಾರಿಸಿ ಸನ್ರೈಸರ್ಸ್ ಹೈದರಾಬಾದ್ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಪವರ್ಪ್ಲೇನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 2 ದಾಖಲೆಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಎಸ್ಆರ್ಹೆಚ್ ತಂಡ ಯಶಸ್ವಿಯಾಗಿದೆ.