
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಜಯ ಸಾಧಿಸಿದೆ. ಈ ಪಂದ್ಯದ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ (Virat Kohli). ಪಂಬಾಬ್ ಕಿಂಗ್ಸ್ ನೀಡಿದ 177 ರನ್ಗಳ ಗುರಿ ಬೆನ್ನತ್ತಲು ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.

ಮೊದಲ ಓವರ್ನಲ್ಲಿ ಸಿಕ್ಕ ಜೀವದಾನವನ್ನು ಸಂಪೂರ್ಣವಾಗಿ ಬಳಸಿಕೊಂಡ ವಿರಾಟ್ ಕೊಹ್ಲಿ ಸ್ಪೋಟಕ ಇನಿಂಗ್ಸ್ ಆಡಿದರು. ಅಲ್ಲದೆ ಪಂಜಾಬ್ ಬೌಲರ್ಗಳನ್ನು ಬೆಂಡೆತ್ತುವ ಮೂಲಕ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಈ ಅರ್ಧಶತಕದೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಹಾಫ್ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಕಿಂಗ್ ಕೊಹ್ಲಿ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಅವರ ಹೆಸರಿನಲ್ಲಿತ್ತು.

ಐಪಿಎಲ್ನಲ್ಲಿ 219 ಪಂದ್ಯಗಳನ್ನಾಡಿರುವ ಶಿಖರ್ ಧವನ್ ಈವರೆಗೆ 50 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತೀ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.

ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 49 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 77 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಈ ದಾಖಲೆ ಮುರಿದಿದ್ದಾರೆ. 239 ಐಪಿಎಲ್ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ 51 ಅರ್ಧಶತಕಗಳನ್ನು ಬಾರಿಸಿ ಈ ಸಾಧನೆ ಮಾಡಿದ್ದಾರೆ.

ಇನ್ನು ಐಪಿಎಲ್ ಅರ್ಧಶತಕಗಳ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೇವಿಡ್ ವಾರ್ನರ್. 177 ಐಪಿಎಲ್ ಪಂದ್ಯಗಳನ್ನಾಡಿರುವ ವಾರ್ನರ್ ಒಟ್ಟು 61 ಅರ್ಧಶತಕಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನೂ 11 ಹಾಫ್ ಸೆಂಚುರಿಗಳ ಅವಶ್ಯಕತೆಯಿದೆ.

ಹಾಗೆಯೇ ಈ ಪಂದ್ಯದಲ್ಲಿ ಬಾರಿಸಿದ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ 100 ಬಾರಿ 50+ ಸ್ಕೋರ್ಗಳಿಸಿದ ವಿಶೇಷ ದಾಖಲೆಯನ್ನು ಕೂಡ ಬರೆದಿದ್ದಾರೆ. ಅಂದರೆ ಟಿ20 ಕ್ರಿಕೆಟ್ನಲ್ಲಿ ಕೇವಲ ಮೂವರು ಬ್ಯಾಟರ್ಗಳು ಮಾತ್ರ 100 ಅಥವಾ ಅದಕ್ಕಿಂತ ಹೆಚ್ಚು ಬಾರಿ 50+ ಸ್ಕೋರ್ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (139) ಅಗ್ರಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ (109) ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೀಗ 100ನೇ 50+ ಸ್ಕೋರ್ಗಳೊಂದಿಗೆ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.