
ಮಾರ್ಚ್ 22 ರಿಂದ 17ನೇ ಆವೃತ್ತಿಯ ಐಪಿಎಲ್ ಪ್ರಾರಂಭವಾಗುತ್ತಿದೆ. ಈ ಸೀಸನ್ನ ಮೊದಲ ಪಂದ್ಯ ಪ್ರಸಕ್ತ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಸೀಸನ್ ಆರಂಭಕ್ಕೂ ಮುನ್ನ ಧೋನಿ ಬಹಳ ದಿನಗಳ ನಂತರ ತಮ್ಮ ಫೇಸ್ ಬುಕ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಐಪಿಎಲ್ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಧೋನಿ ಅಷ್ಟಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವುದಿಲ್ಲ. ಆದರೀಗ ಐಪಿಎಲ್ ಆರಂಭಕ್ಕೂ ಮುನ್ನ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಮಹೀ, ಹೊಸ ಸೀಸನ್‌ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈ ಆವೃತ್ತಿಯಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈಗ ಧೋನಿಯ ಈ ಹೊಸ ಪಾತ್ರ ಯಾವುದು ಎಂಬುದರ ಬಗ್ಗೆ ಊಹಾಪೋಹಗಳು ಶುರುವಾಗಿವೆ.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಈ ತಂಡ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಈ ಎಲ್ಲಾ ಪ್ರಶಸ್ತಿಗಳನ್ನು ಗೆದ್ದಿದೆ. ಕಳೆದ ವರ್ಷ ಧೋನಿ ನಾಯಕತ್ವದಲ್ಲೇ ಚೆನ್ನೈ ತಂಡ ಐದನೇ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ ಮುಂಬರುವ ಸೀಸನ್ನಲ್ಲೂ ಧೋನಿಯೇ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿತ್ತು.

ವಾಸ್ತವವಾಗಿ 2021 ರಐಪಿಎಲ್ಗೂ ಮೊದಲು, ಧೋನಿ ಇದ್ದಕ್ಕಿದ್ದಂತೆ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ತೆಗೆದುಕೊಂಡಿದ್ದರು. ಆ ನಂತರ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಲಾಗಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ತಂಡದ ಪ್ರದರ್ಶನ ಕುಸಿದ ಬಳಿಕ ಮತ್ತೆ ಧೋನಿಗೆ ನಾಯಕತ್ವ ನೀಡಲಾಗಿತ್ತು.

ಆದರೀಗ ಟೂರ್ನಿ ಆರಂಭಕ್ಕೂ ಮುನ್ನ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದಿರುವ ಧೋನಿ, ನಾಯಕತ್ವವನ್ನು ತೊರೆಯುತ್ತಾರೆಯೇ ಅಥವಾ ನಿವೃತ್ತಿ ಘೋಷಿಸುತ್ತಾರೆಯೇ ಅಥವಾ ಮಾರ್ಗದರ್ಶಕನ ಪಾತ್ರದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗಳು ಮೂಡಿವೆ.

ವಾಸ್ತವವಾಗಿ ಧೋನಿ ಯಾವುದೇ ನಿರ್ಧಾರಗಳನ್ನು ಪೂರ್ವನಿಯೋಜಿತಗೊಳಿಸುವುದಿಲ್ಲ. ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರ ಪ್ರಕಟಿಸಿ ಎಲ್ಲರನ್ನೂ ಅಚ್ಚರಿಗೊಳಿಸುವ ಧೋನಿ ಈ ಬಾರಿಯೂ ಅದೇ ರೀತಿ ಮಾಡಿದ್ದಾರೆ. ಫೇಸ್ಬುಕ್ನಲ್ಲಿ ಒಂದು ಸಾಲಿನ ಹೇಳಿಕೆ ನೀಡಿರುವ ಧೋನಿ ಮುಂದಿನ ದಿನಗಳಲ್ಲಿ ಏನು ಮಾಡುತ್ತಾರೆಂದು ಕಾದು ನೋಡಬೇಕಿದೆ.

ಸದ್ಯಕ್ಕೆ ಕೇಳಿಬಂದಿರುವ ಮಾಹಿತಿ ಪ್ರಕಾರ, ಇಷ್ಟು ದಿನ ಇನ್ನಿಂಗ್ಸ್ನ ಕೊನೆಯಲ್ಲಿ ಬ್ಯಾಟಿಂಗ್ಗೆ ಬರುತ್ತಿದ್ದ ಧೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಬಹುದು ಎಂಬ ಊಹಾಪೋಹಗಳೂ ಇವೆ. ಅದರ ಪ್ರಕಾರ ಅವರು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು ಎನ್ನಲಾಗುತ್ತಿದೆ. ಧೋನಿ ಯಾವ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು ಅಥವಾ ಅಭಿಮಾನಿಗಳು ಮಾರ್ಚ್ 22 ರವರೆಗೆ ಕಾಯಬೇಕು.