ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ನಗೆ ಬೀರಿರುವ ಆರ್‌ಸಿಬಿ ಲೀಗ್ನಲ್ಲಿ ಎರಡನೇ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 206 ರನ್ ಕಲೆಹಾಕಿತು.
ಆರ್‌ಸಿಬಿ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 51 ರನ್ಗಳ ಇನ್ನಿಂಗ್ಸ್ ಆಡಿದರೆ, ಸ್ಫೋಟಕ ಬ್ಯಾಟಿಂಗ್ ನಡೆಸಿದ ರಜತ್ ಪಾಟಿದಾರ್ ಕೇವಲ 20 ಎಸೆತಗಳಲ್ಲಿ 50 ರನ್ ಚಚ್ಚಿದರು. ಇದರೊಂದಿಗೆ ಕಳೆದ 11 ವರ್ಷಗಳಲ್ಲಿ ತಂಡದ ಯಾವುದೇ ಬ್ಯಾಟ್ಸ್‌ಮನ್ ಮಾಡದಂತಹ ಸಾಧನೆಯನ್ನು ರಜತ್ ಪಾಟಿದಾರ್ ಈ ಇನ್ನಿಂಗ್ಸ್‌ನಲ್ಲಿ ಮಾಡಿದರು.
ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ರಜತ್ ಪಾಟಿದಾರ್ 20 ಎಸೆತಗಳಲ್ಲಿ 250 ಸ್ಟ್ರೈಕ್ ರೇಟ್‌ನಲ್ಲಿ 50 ರನ್ ಬಾರಿಸಿದರು. ಪಾಟಿದಾರ್ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ಗಳು ಸೇರಿದ್ದವು. ಕೇವಲ 19 ಎಸೆತಗಳಲ್ಲಿ 50 ರನ್ ಪೂರೈಸಿದ ರಜತ್ ಆರ್‌ಸಿಬಿ ಪರ ಅತಿ ವೇಗದ ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು.
ಇದರೊಂದಿಗೆ ಆರ್‌ಸಿಬಿ ತಂಡದ ಪರ ಬರೋಬ್ಬರಿ 11 ವರ್ಷಗಳ ನಂತರ ಬ್ಯಾಟ್ಸ್‌ಮನ್ ಒಬ್ಬ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಾಧನೆಯನ್ನು ಮಾಡಿದರು. ಇದಕ್ಕೂ ಮುನ್ನ 2013ರಲ್ಲಿ ಕ್ರಿಸ್ ಗೇಲ್ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ರಜತ್ ಜೊತೆಗೆ ಈ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಈ ಸೀಸನ್ನಲ್ಲಿ 400 ರನ್ ಪೂರೈಸಿದರು. ಇದರೊಂದಿಗೆ 10 ಸೀಸನ್ಗಳಲ್ಲಿ 400+ ರನ್ ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಕಿಂಗ್ ಕೊಹ್ಲಿ ಪಾಲಾಗಿದೆ.
ಅಷ್ಟೇ ಅಲ್ಲದೆ, ಐಪಿಎಲ್‌ನಲ್ಲಿ ಆರಂಭಿಕರಾಗಿ 4000 ರನ್ ಪೂರೈಸಿದ ನಾಲ್ಕನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.