IPL 2024: ಸರ್ಫರಾಝ್ ಖಾನ್ ಐಪಿಎಲ್ಗೆ ಎಂಟ್ರಿ?
TV9 Web | Updated By: ಝಾಹಿರ್ ಯೂಸುಫ್
Updated on:
Feb 20, 2024 | 3:30 PM
Sarfaraz Khan: IPL ನಲ್ಲಿ ಆರ್ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಒಟ್ಟು 50 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸರ್ಫರಾಝ್ ಖಾನ್ ಒಂದು ಅರ್ಧಶತಕದೊಂದಿಗೆ 585 ರನ್ ಮಾತ್ರ ಕಲೆಹಾಕಿದ್ದಾರೆ. ಇದಾಗ್ಯೂ ಈ ಬಾರಿಯ ಹರಾಜಿನಲ್ಲಿ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸರ್ಫರಾಝ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
1 / 7
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಸರ್ಫರಾಝ್ ಖಾನ್ಗೆ (Sarfaraz Khan) ಅದೃಷ್ಟ ಖುಲಾಯಿಸುವ ಲಕ್ಷಣಗಳು ಕಾಣಿಸುತ್ತಿದೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಬಿಕರಿಯಾಗದೇ ಉಳಿದಿದ್ದ ಯುವ ಆಟಗಾರನ ಖರೀದಿಗೆ ಇದೀಗ ಪ್ರಮುಖ ಫ್ರಾಂಚೈಸಿಯೊಂದು ಮುಂದಾಗಿದೆ ಎಂದು ವರದಿಯಾಗಿದೆ.
2 / 7
ಹೌದು, ಸರ್ಫರಾಝ್ ಖಾನ್ ಅವರ ಖರೀದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಆಸಕ್ತಿವಹಿಸಿದೆ. ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಯುವ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.
3 / 7
ಪ್ರಸ್ತುತ ಕೆಕೆಆರ್ ತಂಡದಲ್ಲಿ ಒಟ್ಟು 23 ಆಟಗಾರರಿದ್ದಾರೆ. ಐಪಿಎಲ್ ನಿಯಮದ ಪ್ರಕಾರ ಒಟ್ಟು 25 ಆಟಗಾರರನ್ನು ಖರೀದಿಸಬಹುದು. ಇತ್ತ ಹರಾಜು ಮೊತ್ತದಲ್ಲಿ 1.35 ಕೋಟಿ ರೂ. ಉಳಿಸಿಕೊಂಡಿರುವ ಕೆಕೆಆರ್ ತಂಡಕ್ಕೆ ಇಬ್ಬರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
4 / 7
ಇದೀಗ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಸರ್ಫರಾಝ್ ಖಾನ್ ಅವರನ್ನು ಆಯ್ಕೆ ಮಾಡುವಂತೆ ಗೌತಮ್ ಗಂಭೀರ್ ಸೂಚಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೆಕೆಆರ್ ತಂಡದಲ್ಲಿ ಏಕೈಕ ಭಾರತೀಯ ವಿಕೆಟ್ ಕೀಪರ್ ಇರುವುದು.
5 / 7
ಅಂದರೆ ತಂಡದಲ್ಲಿ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಎಸ್ ಭರತ್ ಮಾತ್ರ ಇದ್ದಾರೆ. ಇತ್ತ ಸರ್ಫರಾಝ್ ಖಾನ್ ಕೂಡ ವಿಕೆಟ್ ಕೀಪರ್ ಬ್ಯಾಟರ್. ಇದೀಗ ಹೆಚ್ಚುವರಿ ವಿಕೆಟ್ ಕೀಪರ್ ಆಯ್ಕೆಗೆ ಮುಂದಾಗಿರುವ ಕೆಕೆಆರ್ ಫ್ರಾಂಚೈಸಿ ಸರ್ಫರಾಝ್ ಖರೀದಿಗೆ ಹೆಚ್ಚಿನ ಆಸಕ್ತಿವ ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
6 / 7
ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಸರ್ಫರಾಝ್ ಖಾನ್ 4 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ ಕೇವಲ 53 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ಸರ್ಫರಾಝ್ 138 ಎಸೆತಗಳಲ್ಲಿ ಒಟ್ಟು 130 ರನ್ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
7 / 7
ಅದರಂತೆ ಇದೀಗ ಕೆಕೆಆರ್ ಫ್ರಾಂಚೈಸಿಯು ಸರ್ಫರಾಝ್ ಖಾನ್ ಅವರ ಖರೀದಿಗೆ ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಯುವ ದಾಂಡಿಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರೂ ಅಚ್ಚರಿಪಡಬೇಕಿಲ್ಲ.