Virat Kohli: ವಿರಾಟ್ ಕೊಹ್ಲಿಯ 2ನೇ ಮಗುವಿನ ಹೆಸರಿನ ಅರ್ಥವೇನು ಗೊತ್ತಾ?
Akaay Name Meaning: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ 2ನೇ ಮಗುವಿಗೆ ಅಕಾಯ್ ಎಂದು ಹೆಸರನ್ನಿಟ್ಟಿದ್ದಾರೆ. ಮೊದಲ ಮಗುವಿಗೆ ವಾಮಿಕಾ ಎಂದು ಹೆಸರನ್ನಿಟ್ಟಿದ್ದ ವಿರುಷ್ಕಾ ದಂಪತಿ ಇದೀಗ ಪುತ್ರನನ್ನು ಅಕಾಯ್ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಜೂನಿಯರ್ ಕೊಹ್ಲಿಯ ಹೆಸರಿನ ಅರ್ಥವೇನು ಎಂಬ ಹುಡುಕಾಟ ಶುರುವಾಗಿದೆ.
Updated on: Feb 21, 2024 | 8:02 AM

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಫೆಬ್ರವರಿ 15 ರಂದು ಪತ್ನಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಖುಷಿಯ ವಿಚಾರವನ್ನು ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅತೀ ಸಂತೋಷ ಮತ್ತು ಪ್ರೀತಿಯಿಂದ ನಮ್ಮ ಹೃದಯಗಳು ತುಂಬಿವೆ. ಫೆಬ್ರವರಿ 15 ರಂದು, ನಾವು ನಮ್ಮ ಗಂಡು ಮಗು ಅಕಾಯ್ ಅನ್ನು ನಮ್ಮ ಜೀವನಕ್ಕೆ ಸ್ವಾಗತಿಸಿದ್ದೇವೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಗೂಗಲ್ ಸರ್ಚ್ನಲ್ಲಿ ಅಕಾಯ್ ಹೆಸರಿನ ಅರ್ಥವೇನು ಎಂಬುದರ ಹುಡುಕಾಟ ಕೂಡ ಶುರುವಾಗಿದೆ.

ಈ ಹುಡುಕಾಟಕ್ಕೆ ಎರಡು ಅರ್ಥಗಳು ಸಿಗುತ್ತವೆ. ಅಂದರೆ ಅಕಾಯ್ ಎಂಬುದು ಸಂಸ್ಕೃತ ಮೂಲವನ್ನು ಹೊಂದಿದ್ದು. ಇದರ ಅರ್ಥ ನಿರಾಕಾರ ಅಥವಾ ದೈಹಿಕ ಶಕ್ತಿಗಿಂತ ಮಿಗಿಲಾದವನು. ಈ ಹೆಸರು ಶಿವನ ಸಹಸ್ರನಾಮಗಳಲ್ಲಿ ಒಂದು ಎನ್ನಲಾಗಿದೆ. ಇನ್ನು ಇದೇ ಹೆಸರು ಟರ್ಕಿಶ್ ಭಾಷೆಯಲ್ಲೂ ಇದ್ದು, ಅಲ್ಲಿ ‘ಹೊಳೆಯುವ ಚಂದ್ರ’ ಎಂಬಾರ್ಥವಿದೆ.

ಇನ್ನು ವಿರಾಟ್ ಕೊಹ್ಲಿ ದಂಪತಿ ತಮ್ಮ ಮೊದಲ ಮಗುವಿಗೆ ವಾಮಿಕಾ ಎಂದು ಹೆಸರಿಟ್ಟಿದ್ದರು. ಇದು ದುರ್ಗಾ ದೇವಿಯ ಹೆಸರನ್ನು ಸೂಚಿಸುತ್ತದೆ. ಹೀಗಾಗಿ ಅಕಾಯ್ ಹೆಸರನ್ನು ಕೂಡ ವಿರಾಟ್ ಕೊಹ್ಲಿ ಶಿವನ ಸಹಸ್ರನಾಮಗಳಿಂದ ಆಯ್ಕೆ ಮಾಡಿರುವ ಸಾಧ್ಯತೆಯಿದೆ.

ಇನ್ನು ವಿರಾಟ್ ಕೊಹ್ಲಿ ತಮ್ಮ ಮಗಳಿಗೆ V (Vರಾಟ್) ಯಿಂದ ಶುರುವಾಗುವ ಹೆಸರನ್ನಿಟ್ಟರೆ, ಮಗನಿಗೆ A (Aನುಷ್ಕಾ) ಶುರುವಾಗುವ ಅಕಾಯ್ ಎಂದು ಹೆಸರನ್ನಿಟ್ಟಿರುವುದು ವಿಶೇಷ. ಅಂದರೆ ತಂದೆಯ ಹೆಸರಿನ ಮೊದಲಾಕ್ಷರದಿಂದ ಮಗಳ ಹೆಸರು ಶುರುವಾದರೆ, ತಾಯಿ ಹೆಸರಿನ ಮೊದಲಾಕ್ಷರದಿಂದ ಮಗನ ಹೆಸರು ಆರಂಭವಾಗುತ್ತದೆ.

ಸದ್ಯ ಪತ್ನಿಯ ಜೊತೆಯಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ಮುಂಬರುವ ಐಪಿಎಲ್ ಮೂಲಕ ಅವರು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಕಿಂಗ್ ಕೊಹ್ಲಿಯ ರಿಎಂಟ್ರಿಗೆ ಮಾರ್ಚ್ 22 ರವರೆಗೆ ಕಾಯಲೇಬೇಕು.
























