
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಶುರುವಾಗಲು ಕೇವಲ ದಿನಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಎಲ್ಲಾ ತಂಡಗಳು ಸಿದ್ಧತೆಗಳು ಶುರು ಮಾಡಿಕೊಂಡಿದ್ದು, ಅದರ ಮೊದಲ ಭಾಗವಾಗಿ ಇದೀಗ ನಾಯಕರುಗಳನ್ನು ಫೈನಲ್ ಮಾಡಲಾಗಿದೆ. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ 3 ತಂಡಗಳನ್ನು ಹೊಸ ನಾಯಕರುಗಳು ಮುನ್ನಡೆಸಲಿದ್ದಾರೆ.

ಕಳೆದ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಮಾಡಿಕೊಂಡಿದೆ.

ಈ ಟ್ರೇಡ್ ಪ್ರಕ್ರಿಯೆಯ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿ ಘೋಷಿಸಿತು. ಅಂದರೆ ಕಳೆದ 10 ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಅದರಂತೆ ಈ ಬಾರಿ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿದೆ.

ಇತ್ತ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ಗೆ ಹೋದ ಬೆನ್ನಲ್ಲೇ, ಗುಜರಾತ್ ಟೈಟಾನ್ಸ್ ತಂಡವು ಶುಭ್ಮನ್ ಗಿಲ್ ಅವರನ್ನು ಹೊಸ ನಾಯಕನನ್ನಾಗಿ ಘೋಷಿಸಿದೆ. ಅದರಂತೆ ಗಿಲ್ ಸಾರಥ್ಯದಲ್ಲಿ ಈ ಬಾರಿ ಗುಜರಾತ್ ಟೈಟಾನ್ಸ್ ತಂಡವು ಕಣಕ್ಕಿಳಿಯಲಿದೆ.

ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಕೂಡ ಐಪಿಎಲ್ ಸೀಸನ್-17 ಗಾಗಿ ಹೊಸ ನಾಯಕನನ್ನು ಘೋಷಿಸಿದೆ. ಅದರಂತೆ ಈ ಬಾರಿ ಪ್ಯಾಟ್ ಕಮಿನ್ಸ್ ಸಾರಥ್ಯದಲ್ಲಿ ಸನ್ರೈಸರ್ಸ್ ಪಡೆ ಕಣಕ್ಕಿಳಿಯಲಿದೆ.

ಐಪಿಎಲ್ 2023 ರಲ್ಲಿ ಮುನ್ನಡೆಸಿದ್ದ ಐಡೆನ್ ಮಾರ್ಕ್ರಾಮ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ಅವರ ಬದಲಿಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ಗೆ ಕಪ್ತಾನಗಿರಿ ನೀಡಲಾಗಿದೆ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಕಮಿನ್ಸ್ ಸಾರಥ್ಯದಲ್ಲಿ ಮೈದಾನಕ್ಕಿಳಿಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಆವೃತ್ತಿ ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದರೊಂದಿಗೆ ಐಪಿಎಲ್ ಸೀಸನ್-17 ಗೆ ಚಾಲನೆ ಸಿಗಲಿದೆ.