
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು. ಅಲ್ಲದೆ ಪವರ್ ಪ್ಲೇನಲ್ಲಿ ಬರೋಬ್ಬರಿ 125 ರನ್ ಬಾರಿಸಿ ವಿಶ್ವ ದಾಖಲೆ ಕೂಡ ನಿರ್ಮಿಸಿತು.

ಹೈದರಾಬಾದ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಮೊದಲ ಓವರ್ನಿಂದಲೇ ಬೌಂಡರಿ, ಸಿಕ್ಸರ್‌ಗಳ ಮಳೆಗರೆದು, ತಂಡವನ್ನು ಮೊದಲ 5 ಓವರ್ಗಳಲ್ಲಿ ಶತಕದ ಗಡಿ ದಾಟಿಸಿದರು.

ಅಲ್ಲದೆ ಈ ಇಬ್ಬರು ಮೊದಲ 6 ಓವರ್ಗಳ ಅಂತ್ಯಕ್ಕೆ ಅಂದರೆ ಪವರ್ ಪ್ಲೇ ಅಂತ್ಯಕ್ಕೆ ಬರೋಬ್ಬರಿ 125 ರನ್ ಕಲೆಹಾಕಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ 6 ಓವರ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ತಂಡ ಎಂಬ ದಾಖಲೆಯನ್ನು ಸೃಷ್ಟಿಸಿದರು.

ಇದಕ್ಕೂ ಮುನ್ನ ಟಿ20 ಬ್ಲಾಸ್ಟ್ನಲ್ಲಿ ಡರ್ಹಾಮ್ ತಂಡದ ವಿರುದ್ಧ 2017 ರಲ್ಲಿ ನಾಟಿಂಗ್ಹ್ಯಾಮ್ಶೈರ್ ತಂಡ ಮೊದಲ 6 ಓವರ್ಗಳಲ್ಲಿ 106 ರನ್ ಕಲೆಹಾಕಿ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತ್ತು. ಇದೀಗ ಆ ದಾಖಲೆ ಸನ್ ಹೈದರಾಬಾದ್ ತಂಡದ ಪಾಲಾಗಿದೆ.

ಈ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಫಾರ್ಮ್ನಲ್ಲಿದೆ. ಈಗಾಗಲೇ ಈ ತಂಡ ಮೂರು ಪಂದ್ಯಗಳಲ್ಲಿ 250+ ರನ್ ಕಲೆಹಾಕಿದೆ. ಮೊದಲು ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಬಾರಿಸಿದ್ದರೆ, ಆ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 287 ರನ್ ಬಾರಿಸಿತ್ತು. ಇದೀಗ ಡೆಲ್ಲಿ ವಿರುದ್ಧ 266 ರನ್ ಕಲೆಹಾಕಿದೆ.

ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ ಕೇವಲ 38 ಎಸೆತಗಳಲ್ಲಿ 131 ರನ್ ಜೊತೆಯಾಟ ನೀಡಿದರು. ಅಂತಿಮವಾಗಿ ಹೆಡ್ ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ 89 ರನ್‌ಗಳ ಇನಿಂಗ್ಸ್ ಆಡಿದರೆ ಅಭಿಷೇಕ್ 12 ಎಸೆತಗಳಲ್ಲಿ 49 ರನ್‌ಗಳ ಕಾಣಿಕೆ ನೀಡಿದರು.