
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲ 6 ಓವರ್ಗಳಲ್ಲಿ ಅಂದರೆ ಪವರ್ ಪ್ಲೇನಲ್ಲಿ ಬರೋಬ್ಬರಿ 125 ರನ್ ಕಲೆಹಾಕಿದೆ.

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಊಹೆಗೂ ನಿಲುಕದ ಆರಂಭ ನೀಡಿದರು. ಈ ಇಬ್ಬರು ಮೊದಲ 6 ಓವರ್ಗಳಲ್ಲಿ ಪ್ರತಿ ಓವರ್ಗೆ ತಲಾ 20 ಕ್ಕೂ ಅಧಿಕ ರನ್ಗಳನ್ನು ಕಲೆಹಾಕಿದರು.

ಡೆಲ್ಲಿ ಪರ ಮೊದಲ ಓವರ್ ಬೌಲ್ ಮಾಡಿದ ಖಲೀಲ್ ಅಹ್ಮದ್ ಈ ಓವರ್ನಲ್ಲಿ ಬರೋಬ್ಬರಿ 19 ರನ್ ಬಿಟ್ಟುಕೊಟ್ಟರು. ಲಲಿತ್ ಯಾದವ್ ಬೌಲ್ ಮಾಡಿದ ಎರಡನೇ ಓವರ್ನಲ್ಲೂ 21 ರನ್ ಬಂದವು.

ನೋಕಿಯಾ ಬೌಲ್ ಮಾಡಿದ 3ನೇ ಓವರ್ನಲ್ಲೂ 22 ರನ್ ಬಂದವು. ಈ ಮೂಲಕ ಇದೇ ಓವರ್ನಲ್ಲಿ ಹೈದರಾಬಾದ್ನ ಮೊತ್ತ 50 ರನ್ಗಳ ಗಡಿ ದಾಟಿದರೆ, ಇದೇ ಓವರ್ನಲ್ಲಿ ಟ್ರಾವಿಸ್ ಹೆಡ್ ಕೂಡ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

4ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಲಲಿತ್ ಯಾದವ್ ಈ ಓವರ್ನಲ್ಲೂ 21 ರನ್ ಬಿಟ್ಟುಕೊಟ್ಟರು. ಐದನೇ ಓವರ್ ಬೌಲ್ ಮಾಡಿದ ಕುಲ್ದೀಪ್ ಯಾದವ್ ಕೂಡ ದುಬಾರಿಯಾಗಿ 20 ರನ್ ಬಿಟ್ಟುಕೊಟ್ಟರು. ಹೀಗಾಗಿ ಹೈದರಾಬಾದ್ ತಂಡ ಐದನೇ ಓವರ್ನಲ್ಲೇ ಶತಕದ ಗಡಿ ದಾಟಿತು.

ಅಲ್ಲದೆ ಆರಂಭಿಕರಿಬ್ಬರ ಜೊತೆ ಶತಕದ ಜೊತೆಯಾಟ ಕೂಡ ಕಂಡುಬಂತು. ಪವರ್ ಪ್ಲೇಯ ಕೊನೆಯ ಓವರ್ನಲ್ಲಿ ಅಂದರೆ 6ನೇ ಓವರ್ನಲ್ಲೂ 22 ರನ್ಗಳು ಹರಿದುಬಂದವು. ಮುಖೇಶ್ ಕುಮಾರ್ ಬೌಲ್ ಮಾಡಿದ ಈ ಓವರ್ನಲ್ಲಿ ಹೆಡ್ ಸತತ 4 ಬೌಂಡರಿಗಳನ್ನು ಬಾರಿಸಿದರು.