
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 50 ಪಂದ್ಯಗಳು ಪೂರ್ಣಗೊಳ್ಳುವ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಪರಾಜಯಗೊಳ್ಳುವುದರೊಂದಿಗೆ ಸಿಎಸ್ಕೆ ತಂಡದ ಕಪ್ ಗೆಲ್ಲುವ ಕನಸು ಕಮರಿದೆ.

ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬ್ಯಾಕ್ ಟು ಬ್ಯಾಕ್ ಎರಡು ಸೀಸನ್ಗಳಲ್ಲಿ ಪ್ಲೇಆಫ್ ಆಡದೇ ಹೊರಬಿದ್ದಂತಾಗಿದೆ. ಕಳೆದ 15 ಸೀಸನ್ಗಳಲ್ಲಿ ಸಿಎಸ್ಕೆ ಕೇವಲ ಮೂರು ಬಾರಿ ಮಾತ್ರ ಪ್ಲೇಆಫ್ ಆಡಿರಲಿಲ್ಲ. ಇದೀಗ ನಾಲ್ಕನೇ ಬಾರಿಗೆ ಚೆನ್ನೈ ಪಡೆ ಲೀಗ್ ಹಂತದಿಂದಲೇ ಹೊರಬಿದ್ದಿದೆ.

ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ 2020, 2022 ಮತ್ತು 2024 ರಲ್ಲಿ ಲೀಗ್ ಹಂತದಲ್ಲಿ ಹೊರಬಿದ್ದಿತ್ತು. ಆದರೆ ಇದೇ ಮೊದಲ ಬಾರಿ ಬ್ಯಾಕ್ ಟು ಬ್ಯಾಕ್ ಎರಡು ಸೀಸನ್ಗಳಲ್ಲಿ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ. 2024 ರಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಧೋನಿ ಪಡೆ ಈ ಬಾರಿ ಕೂಡ ಅದನ್ನೇ ಪುನರಾವರ್ತಿಸಿದೆ.

ಇಂತಹದೊಂದು ವೈಫಲ್ಯದಿಂದಾಗಿ ಸೂಪರ್ ಕಿಂಗ್ಸ್ ಆಟಗಾರರು ನಿರಾಶೆಗೊಂಡಂತೆ ಕಂಡುಬಂದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಅವರ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು. ಧೋನಿಯಿಂದ ಹಿಡಿದು ಜಡೇಜಾವರೆಗೆ ಎಲ್ಲರೂ ಬೇಸರದೊಂದಿಗೆ ಹೆಜ್ಜೆ ಹಾಕಿದ್ದರು.

ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಅವರೊಂದಿಗೆ ಸುದೀರ್ಘ ಚರ್ಚೆಯಲ್ಲಿ ತೊಡಗಿಸಿಕೊಂಡಿರುವುದು ಕೂಡ ಕಂಡು ಬಂತು. ಒಟ್ಟಿನಲ್ಲಿ 5 ಬಾರಿಯ ಚಾಂಪಿಯನ್ ಇದೇ ಮೊದಲ ಬಾರಿಗೆ ಬ್ಯಾಕ್ ಟು ಬ್ಯಾಕ್ ಸೀಸನ್ಗಳಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದು ನಿರಾಶೆ ಅನುಭವಿಸಿದೆ. ಈ ನಿರಾಶೆಯೊಂದಿಗೆ ಈ ಬಾರಿ ಕಪ್ ಗೆಲ್ಲಬೇಕೆಂಬ ಸಿಎಸ್ಕೆ ತಂಡ ಕನಸು ಕೂಡ ಕಮರಿದೆ.