
ಟೀಮ್ ಇಂಡಿಯಾ ಆಟಗಾರ ವಾಷಿಂಗ್ಟನ್ ಸುಂದರ್ ಐಪಿಎಲ್ (IPL 2025) ಸೀಸನ್ 18ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಪ್ರಸ್ತುತ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಸುಂದರ್ ಮುಂಬರುವ ಸೀಸನ್ಗಾಗಿ ರಿಟೈನ್ ಆಗುತ್ತಿಲ್ಲ. ಬದಲಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಈ ಸುದ್ದಿ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಖರೀದಿಗಾಗಿ ಮೂರು ಫ್ರಾಂಚೈಸಿಗಳು ಆಸಕ್ತಿ ಹೊಂದಿದೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವರದಿಯಂತೆ ಮೂರು ಪ್ರಮುಖ ಫ್ರಾಂಚೈಸಿಗಳು ಸುಂದರ್ಗಾಗಿ ಮೆಗಾ ಹರಾಜಿನಲ್ಲಿ ಭರ್ಜರಿ ಪೈಪೋಟಿ ನಡೆಸಲಿದೆ.

ಇಲ್ಲಿ ವಾಷಿಂಗ್ಟನ್ ಸುಂದರ್ ಅವರ ಖರೀದಿಗಾಗಿ ಹೆಚ್ಚಿನ ಆಸಕ್ತಿ ಹೊಂದಿರುವುದು ಚೆನ್ನೈ ಸೂಪರ್ ಕಿಂಗ್ಸ್. ಸಿಎಸ್ಕೆ ತಂಡದಲ್ಲಿ ರವೀಂದ್ರ ಜಡೇಜಾಗೆ ಉತ್ತಮ ಸ್ಪಿನ್ ಆಲ್ರೌಂಡರ್ನ ಸಾಥ್ ಬೇಕಿದೆ. ಈ ಜಾಗವನ್ನು ತುಂಬಲು ತಮಿಳುನಾಡುವ ಮೂಲದ ಸುಂದರ್ ಅವರನ್ನು ಖರೀದಿಸಲು ಸಿಎಸ್ಕೆ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ.

ಇನ್ನು ಮುಂಬೈ ಇಂಡಿಯನ್ಸ್ ಕೂಡ ಸ್ಪಿನ್ ಆಲ್ರೌಂಡರ್ನ ಹುಡುಕಾಟದಲ್ಲಿದೆ. ಹೀಗಾಗಿಯೇ ಮುಂದಿನ ಮೆಗಾ ಹರಾಜಿನಲ್ಲಿ ವಾಷಿಂಗ್ಟನ್ ಅವರ ಖರೀದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದಾಗಲಿದೆ ಎಂದು ವರದಿಯಾಗಿದೆ.

ಹಾಗೆಯೇ ಗುಜರಾತ್ ಟೈಟಾನ್ಸ್ ಕೂಡ ವಾಷಿಂಗ್ಟನ್ ಸುಂದರ್ ಮೇಲೆ ಕಣ್ಣಿಟ್ಟಿದ್ದಾರೆ. ರಶೀದ್ ಖಾನ್ ಜೊತೆಗೆ ಸುಂದರ್ ಕೂಡ ತಂಡಕ್ಕೆ ಸೇರಿಕೊಂಡರೆ ಪ್ಲೇಯಿಂಗ್ ಇಲೆವೆನ್ ಮತ್ತಷ್ಟು ಬಲಿಷ್ಠವಾಗಲಿದೆ. ಈ ಲೆಕ್ಕಾಚಾರದೊಂದಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಖರೀದಿಸಲು ಗುಜರಾತ್ ಟೈಟಾನ್ಸ್ ಕೂಡ ಯೋಜನೆ ರೂಪಿಸಿದೆ.

ಹೀಗಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ವಾಷಿಂಗ್ಟನ್ ಸುಂದರ್ ಅವರ ಖರೀದಿಗಾಗಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಗಳು ಪೈಪೋಟಿ ನಡೆಸುವುದು ಬಹುತೇಕ ಖಚಿತ. ಆದರೆ ಈ ಪೈಪೋಟಿಯಲ್ಲಿ ಸುಂದರ್ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.