
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಮೆಗಾ ಹರಾಜಿನ ಕುರಿತಾಗಿ ಬಿಗ್ ಅಪ್ಡೇಟ್ ಹೊರಬಿದ್ದಿದ್ದು, ಅದರಂತೆ ಈ ಬಾರಿಯ ಹರಾಜಿಗೂ ಮುನ್ನ 5+1 ಆಟಗಾರರನ್ನು ಉಳಿಸಿಕೊಳ್ಳಬಹುದು. ಅಂದರೆ ಇಲ್ಲಿ ಐವರು ಆಟಗಾರರನ್ನು ನೇರವಾಗಿ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಿದರೆ, ಓರ್ವನ ಮೇಲೆ ಆರ್ಟಿಎಂ ಆಯ್ಕೆ ಬಳಸಿಕೊಳ್ಳಬಹುದು.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೆಚ್ಚಿನ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ಮುಂದಿಟ್ಟಿದ್ದ ಮತ್ತೊಂದು ಬಹುಕಾಲದ ಬೇಡಿಕೆಗೂ ಬಿಸಿಸಿಐ ಅಸ್ತು ಎಂದಿದ್ದಾರೆ. ಅಲ್ಲದೆ ಹೊಸ ನಿಯಮವು ಈ ಬಾರಿಯ ಐಪಿಎಲ್ನಲ್ಲಿ ಜಾರಿಗೆ ಬರಲಿದೆ.

ಐಪಿಎಲ್ಗೆ ಆಯ್ಕೆಯಾದ ಬಳಿಕ ಟೂರ್ನಿಯಿಂದ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕೆಂದು ಕೆಲ ಫ್ರಾಂಚೈಸಿಗಳು ಈ ಹಿಂದೆ ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಫ್ರಾಂಚೈಸಿಗಳು ಆಗ್ರಹಿಸಿದ್ದವು.

ಅದರಂತೆ ಇದೀಗ ಗಾಯದ ಅಥವಾ ನಿರ್ದಿಷ್ಟ ಕಾರಣದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್ನಿಂದ ಹಿಂದೆ ಸರಿದರೆ, ಆ ಆಟಗಾರನ ಮೇಲೆ 2 ವರ್ಷಗಳವರೆಗೆ ನಿಷೇಧ ಹೇರುವ ನಿಯಮವನ್ನು ಜಾರಿಗೊಳಿಸಲಾಗಿದೆ. ಅಂದರೆ ಹರಾಜಿನಲ್ಲಿ ಆಯ್ಕೆಯಾದ ಆಟಗಾರರು ಇನ್ಮುಂದೆ ಐಪಿಎಲ್ ಆಡುವುದು ಕಡ್ಡಾಯಗೊಳಿಸಲಾಗಿದೆ.

ಐಪಿಎಲ್ 2022, 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜೇಸನ್ ರಾಯ್ ಟೂರ್ನಿ ಆರಂಭಕ್ಕೂ ಕೆಲ ದಿನಗಳಿರುವಾಗ ಹಿಂದೆ ಸರಿದ್ದರು. ಹಾಗೆಯೇ ವನಿಂದು ಹಸರಂಗ (SRH), ಹ್ಯಾರಿ ಬ್ರೂಕ್ (DC), ಡೇವಿಡ್ ವಿಲ್ಲಿ (ಎಲ್ಎಸ್ಜಿ), ಗಸ್ ಅಟ್ಕಿಸನ್ (KKR), ಮಾರ್ಕ್ ವುಡ್ (LSG) ಸೇರಿದಂತೆ ಕೆಲ ಆಟಗಾರರು ಕಳೆದ ಸೀಸನ್ನಲ್ಲಿ ಕೈಕೊಟ್ಟಿದ್ದರು.

ವಿದೇಶಿ ಆಟಗಾರರ ಇಂತಹ ನಡೆಗಳಿಂದ ಬೆಸತ್ತಿರುವ ಫ್ರಾಂಚೈಸಿಗಳು ಇದೀಗ ಕಠಿಣ ನಿಯಮವನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದು, ಅದರಂತೆ ಐಪಿಎಲ್ 2025 ರಿಂದ ಫಾರಿನ್ ಪ್ಲೇಯರ್ಸ್ಗೆ ಬ್ಯಾನ್ ಬಿಸಿ ಮುಟ್ಟಲಿದೆ. ಹೀಗಾಗಿ ಐಪಿಎಲ್ಗೆ ಆಯ್ಕೆಯಾದ ಆಟಗಾರರು ನಿರ್ದಿಷ್ಟ ಕಾರಣಗಳಿಲ್ಲದೆ ಟೂರ್ನಿಯಿಂದ ಹಿಂದೆ ಸರಿಯಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ಐಪಿಎಲ್ ತಂಡಗಳಿಗೆ ಆಯ್ಕೆಯಾಗಿ ಟೂರ್ನಿಯಿಂದ ಹಿಂದೆ ಸರಿದರೆ, ಮುಂದಿನ 2 ವರ್ಷಗಳವರೆಗೆ ಹರಾಜಿನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಅಲ್ಲದೆ ಇಡೀ ಟೂರ್ನಿಯಿಂದಲೇ 2 ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತದೆ. ಹೀಗಾಗಿ ಇನ್ಮುಂದೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವ ವಿದೇಶಿ ಆಟಗಾರರು ವಿನಾಕಾರಣ ಟೂರ್ನಿಯಿಂದ ಹಿಂದೆ ಸರಿದರೆ 2 ವರ್ಷಗಳ ಬ್ಯಾನ್ಗೆ ಒಳಗಾಗಲಿದ್ದಾರೆ.