ಐಪಿಎಲ್ 2025ರ ಮೆಗಾ ಆಕ್ಷನ್ ರಿಟೈನ್ ನಿಯಮ ಪ್ರಕಟವಾಗಿದೆ. ಈ ನಿಯಮದಂತೆ ಈ ಬಾರಿಯ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಇಲ್ಲಿ ಐವರನ್ನು ಆಯ್ಕೆ ಮಾಡಿದರೆ, ಓರ್ವ ಆಟಗಾರನ ಮೇಲೆ ಆರ್ಟಿಎಂ ಆಯ್ಕೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಹಾಗಿದ್ರೆ ಏನಿದು RTM ಆಯ್ಕೆ? ಇದನ್ನು ಬಳಸುವುದು ಹೇಗೆ ಎಂಬ ಪ್ರಶ್ನೆಯೊಂದು ಮೂಡುವುದು ಸಹಜ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...
ಆರ್ಟಿಎಂ ಎಂದರೆ ರೈಟ್ ಟು ಮ್ಯಾಚ್ (RTM) ಆಯ್ಕೆ. ಅಂದರೆ ಮೆಗಾ ಹರಾಜಿನಲ್ಲಿ ಆಟಗಾರರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ವಿಶೇಷ ಆಯ್ಕೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಆಟಗಾರರ ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುವುದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆರ್ಟಿಎಂ ಆಯ್ಕೆಯನ್ನು ಬಳಸಲಾದ ಆಟಗಾರನನ್ನು ನೇರವಾಗಿ ಆಯ್ಕೆ ಮಾಡುವಂತಿಲ್ಲ ಎಂಬುದು.
ಅಂದರೆ ಒಬ್ಬ ಆಟಗಾರನ ಮೇಲೆ ಆರ್ಟಿಎಂ ಆಯ್ಕೆ ಬಳಸಿದರೆ ಆತನನ್ನು ಮೆಗಾ ಹರಾಜಿಗಾಗಿ ಬಿಡುಗಡೆ ಮಾಡಬೇಕಾಗುತ್ತದೆ. ಇದಾಗ್ಯೂ ಮೆಗಾ ಹರಾಜಿನಲ್ಲಿ ಆ ಆಟಗಾರನ ಸಂಪೂರ್ಣ ಹಕ್ಕು ಬಿಡುಗಡೆ ಮಾಡಿದ ಫ್ರಾಂಚೈಸಿಯ ಬಳಿಯೇ ಇರಲಿದೆ. ಇದುವೇ ಈ ಆಯ್ಕೆಯ ವಿಶೇಷತೆ.
ಉದಾಹರಣೆಗೆ: ಆರ್ಸಿಬಿ ತಂಡವು ರಜತ್ ಪಾಟಿದಾರ್ ಅವರನ್ನು ಹರಾಜಿಗಾಗಿ ರಿಲೀಸ್ ಮಾಡಿದೆ ಎಂದಿಟ್ಟುಕೊಳ್ಳಿ. ಆದರೆ ಬಿಡುಗಡೆಗೂ ಮುನ್ನ ಆರ್ಟಿಎಂ ಆಯ್ಕೆ ಬಳಸಿ ಮೆಗಾ ಹರಾಜಿಗಾಗಿ ರಿಲೀಸ್ ಮಾಡಿದರೆ, ಪಾಟಿದಾರ್ ಮೇಲಿನ ಹಕ್ಕು ಆರ್ಸಿಬಿ ಬಳಿಯೇ ಇರುತ್ತದೆ.
ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ರಜತ್ ಪಾಟಿದಾರ್ (ಆರ್ಟಿಎಂ) ಅವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 10 ಕೋಟಿ ರೂ.ವರೆಗೆ ಬಿಡ್ ಮಾಡಿತು ಎಂದಿಟ್ಟುಕೊಳ್ಳಿ. ಈ ವೇಳೆ ಆ ಮೊತ್ತವನ್ನು ತಾವೇ ನೀಡುತ್ತೇವೆ ಎಂದು ಪಾಟಿದಾರ್ ಅವರನ್ನು ಆರ್ಸಿಬಿ ಮರಳಿ ಖರೀದಿಸಬಹುದು.
ಒಂದು ವೇಳೆ ಬಿಡುಗಡೆ ಮಾಡಿದ ತಂಡವು ಮರಳಿ ಖರೀದಿಸಲು ಇಚ್ಛಿಸದಿದ್ದರೆ ಮಾತ್ರ ಆರ್ಟಿಎಂ ಆಯ್ಕೆಯಲ್ಲಿ ಕಾಣಿಸಿಕೊಂಡ ಆಟಗಾರರು ಕೊನೆಯದಾಗಿ ಬಿಡ್ ಮಾಡಿದ ತಂಡದ ಪಾಲಾಗಲಿದ್ದಾರೆ. ಹೀಗಾಗಿಯೇ ಈ ಆಯ್ಕೆಯನ್ನು ಆಟಗಾರರ ಮೇಲಿನ ಹಕ್ಕುಸ್ವಾಮ್ಯ ಎನ್ನಲಾಗುತ್ತದೆ. ಅದರಂತೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಒಬ್ಬ ಆಟಗಾರನ ಮೇಲೆ ಆರ್ಟಿಎಂ ಆಯ್ಕೆ ಬಳಸಬಹುದಾಗಿದ್ದು, ಹೀಗಾಗಿ ಈ ಸಲ ಕೆಲ ಸ್ಟಾರ್ ಆಟಗಾರರು ಆರ್ಟಿಎಂ ಆಯ್ಕೆಯಡಿ ಬಿಡುಗಡೆಯಾದರೂ ಅಚ್ಚರಿಪಡಬೇಕಿಲ್ಲ.
Published On - 11:30 am, Sun, 29 September 24