
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಳ್ಳದ ಕೆಲವೇ ಕೆಲವು ಶ್ರೇಷ್ಠ ಆಟಗಾರರಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ ಕೂಡ ಒಬ್ಬರು. ಇಂಗ್ಲೆಂಡ್ ಪರ ಮೂರು ಸ್ವರೂಪಗಳಲ್ಲಿ ಕಣಕ್ಕಿಳಿದರೂ ಅ್ಯಂಡರ್ಸನ್ ಐಪಿಎಲ್ನತ್ತ ಮಾತ್ರ ಮುಖ ಮಾಡಿರಲಿಲ್ಲ. ಅದರಲ್ಲೂ ಐಪಿಎಲ್ ಹರಾಜಿಗಾಗಿ ಒಮ್ಮೆಯೂ ಹೆಸರು ನೋಂದಾಯಿಸಿಕೊಂಡಿರಲಿಲ್ಲ.

ಆದರೆ ಇದೀಗ 17 ವರ್ಷಗಳ ಬಳಿಕ ಐಪಿಎಲ್ ಹರಾಜಿಗಾಗಿ ಜೇಮ್ಸ್ ಅ್ಯಂಡರ್ಸನ್ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದು ಸಹ ತಮ್ಮ 42ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಅ್ಯಂಡರ್ಸನ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನತ್ತ ಮುಖ ಮಾಡಲು ಇಚ್ಛಿಸಿದ್ದಾರೆ.

ಇಂಗ್ಲೆಂಡ್ನಲ್ಲಿ ನಡೆದ ದಿ ಹಂಡ್ರೆಡ್ ಲೀಗ್ ವೇಳೆ ಮಾತನಾಡಿದ್ದ ಜೇಮ್ಸ್ ಅ್ಯಂಡರ್ಸನ್, ಈ ಲೀಗ್ನಲ್ಲಿ ಒಬ್ಬ ಬೌಲರ್ಗೆ ಕೇವಲ 20 ಎಸೆತಗಳು ಮಾತ್ರ ಇದೆ. ವಿಶೇಷ ಎಂದರೆ ಮೊದಲ 20 ಎಸೆತಗಳಲ್ಲಿ ಚೆಂಡು ಸ್ವಿಂಗ್ ಪಡೆಯುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಾನು ಸಹ ಅದನ್ನು ಮಾಡಬಲ್ಲೆ ಎಂದು ತಿಳಿಸಿದ್ದರು. ಈ ಮೂಲಕ ಫ್ರಾಂಚೈಸಿ ಲೀಗ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಇದರೊಂದಿಗೆ ಜೇಮ್ಸ್ ಅ್ಯಂಡರ್ಸನ್ ಐಪಿಎಲ್ ಸೇರಿದಂತೆ ಪ್ರಮುಖ ಲೀಗ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನಲಾಗಿತ್ತು. ಅದರ ಮೊದಲ ಭಾಗವಾಗಿ ಇದೀಗ ಅ್ಯಂಡರ್ಸನ್ ಐಪಿಎಲ್ ಮೆಗಾ ಹರಾಜಿಗಾಗಿ 1.5 ಕೋಟಿ ರೂ. ಮೂಲಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಜೇಮ್ಸ್ ಅ್ಯಂಡರ್ಸನ್ ಹೆಸರು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಅಂದಹಾಗೆ ಜೇಮ್ಸ್ ಅ್ಯಂಡರ್ಸನ್ ಸದ್ಯ ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇನ್ನುಳಿದ ಸಮಯದಲ್ಲಿ ಲೀಗ್ ಕ್ರಿಕೆಟ್ ಆಡುವ ಇರಾದೆಯಲ್ಲಿದ್ದಾರೆ. ಅಂದರೆ ಇಂಗ್ಲೆಂಡ್ ಆಟಗಾರರು ಐಪಿಎಲ್ ಸೇರಿದಂತೆ ಇತರೆ ಲೀಗ್ ಆಡುವ ವೇಳೆ ಜೇಮ್ಸ್ ಅ್ಯಂಡರ್ಸನ್ ಸಂಪೂರ್ಣ ಫ್ರೀಯಾಗಿರಲಿದ್ದಾರೆ. ಹೀಗಾಗಿ 42ನೇ ವಯಸ್ಸಿನಲ್ಲಿ ಜೇಮ್ಸ್ ಅ್ಯಂಡರ್ಸನ್ ಐಪಿಎಲ್ನತ್ತ ಮುಖ ಮಾಡಲು ಇಚ್ಛಿಸಿದ್ದಾರೆ.