
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಹೊಸ ಚಿಂತೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ತಂಡದಲ್ಲಿರುವ ಸ್ಟಾರ್ ಆಟಗಾರರು. ಅಂದರೆ ಈ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವುದೇ ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದಿರುವ ದೊಡ್ಡ ಸವಾಲು.

ಏಕೆಂದರೆ ಕಳೆದ ಐಪಿಎಲ್ ಹರಾಜಿನ ಮೂಲಕ ಕೆಲ ಆಟಗಾರರು 20 ಕೋಟಿ ರೂ.ಗಿಂತ ಅಧಿಕ ಮೊತ್ತ ಪಡೆದಿದ್ದಾರೆ. ಇನ್ನು ಕೆಲ ಯುವ ಆಟಗಾರರು 15 ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲೇ ಕಳೆದ ಕೆಲ ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವ ಸ್ಟಾರ್ ಆಟಗಾರರ ಸಂಭಾವನೆ ಮೊತ್ತ ಇನ್ನೂ ಸಹ 12 ಕೋಟಿ ರೂ. ದಾಟಿಲ್ಲ. ಹೀಗಾಗಿಯೇ ಈ ಆಟಗಾರರು ಈ ಬಾರಿಯ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆ ಆಟಗಾರರೆಂದರೆ...

ಸೂರ್ಯಕುಮಾರ್ ಯಾದವ್: ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ 2018 ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಅದರಲ್ಲೂ ಕಳೆದ ಐದು ಸೀಸನ್ಗಳಲ್ಲೂ ಅವರು ರಿಟೈನ್ ಆಗಿದ್ದಾರೆ. ಇದಾಗ್ಯೂ ಅವರು ಕಳೆದ ಸೀಸನ್ನಲ್ಲಿ ಪಡೆದ ಮೊತ್ತ ಕೇವಲ 8 ಕೋಟಿ ರೂ. ಮಾತ್ರ.

ಜಸ್ಪ್ರೀತ್ ಬುಮ್ರಾ: 2013 ರಿಂದ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿರುವ ಜಸ್ಪ್ರೀತ್ ಬುಮ್ರಾ ಅವರ ಸಂಭಾವನೆ ಕೂಡ 15 ಕೋಟಿ ರೂ. ದಾಟಿಲ್ಲ ಎಂಬುದು ವಿಶೇಷ. ಅದರಲ್ಲೂ ಕಳೆದ ಎರಡು ಸೀಸನ್ಗಳಲ್ಲಿ ಬುಮ್ರಾಗೆ ನೀಡಲಾಗಿರುವುದು ಕೇವಲ 12 ಕೋಟಿ ರೂ. ಮಾತ್ರ.

ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ 2018 ರಲ್ಲಿ 15 ಕೋಟಿ ರೂ. ಪಡೆದಿದ್ದರು. ಆದರೆ ಕಳೆದ 5 ಸೀಸನ್ಗಳಲ್ಲಿ ಅವರ ಸಂಭಾವನೆಯಲ್ಲಿ ಕೇವಲ 1 ಕೋಟಿ ರೂ. ಮಾತ್ರ ಏರಿಕೆಯಾಗಿದೆ. ಅಂದರೆ ಪ್ರಸ್ತುತ ಅವರ ಮೊತ್ತ 16 ಕೋಟಿ ರೂ.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ನಾಲ್ವರನ್ನು ರಿಟೈನ್ ಮಾಡಿಕೊಳ್ಳುವುದಾದರೆ, ಮೊದಲ ಆಟಗಾರನಿಗೆ 16 ಕೋಟಿ ರೂ, 2ನೇ ಆಟಗಾರನಿಗೆ 12 ಕೋಟಿ ರೂ, ಮೂರನೇ ಆಟಗಾರನಿಗೆ 8 ಕೋಟಿ ರೂ, ನಾಲ್ಕನೇ ಆಟಗಾರನಿಗೆ 4 ಕೋಟಿ ರೂ. ನಿಗದಿ ಮಾಡಬಹುದು. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಹೀಗಾಗಿ ಕಡಿಮೆ ಮೊತ್ತ ಪಡೆಯಲು ಯಾವುದೇ ಆಟಗಾರ ಬಯಸುವುದಿಲ್ಲ ಎಂದೇ ಹೇಳಬಹುದು.

ಒಂದು ವೇಳೆ ಸೂರ್ಯಕುಮಾರ್ ಯಾದವ್ ಹರಾಜಿನಲ್ಲಿ ಕಾಣಿಸಿಕೊಂಡರೆ ಕನಿಷ್ಠ 12 ರಿಂದ 15 ಕೋಟಿ ರೂ.ಗೆ ಬಿಡ್ ಆಗುವುದು ಖಚಿತ. ಹಾಗೆಯೇ ಜಸ್ಪ್ರೀತ್ ಬುಮ್ರಾ ಅವರ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸುವುದು ಕನ್ಫರ್ಮ್. ಹೀಗಾಗಿ ಬುಮ್ರಾ ಅವರ ಮೊತ್ತ 20 ಕೋಟಿ ರೂ. ದಾಟಿದರೂ ಅಚ್ಚರಿಪಡಬೇಕಿಲ್ಲ. ಇನ್ನು ರೋಹಿತ್ ಶರ್ಮಾ ಅವರನ್ನು 16 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಖರೀದಿಸಲು ಇತರೆ ಫ್ರಾಂಚೈಸಿ ಆಸಕ್ತಿವಹಿಸುವುದು ಸಹ ಖಚಿತ.

ಇದೀಗ ಈ ಮೂವರನ್ನು ಮುಂಬೈ ಇಂಡಿಯನ್ಸ್ ರಿಟೈನ್ ಮಾಡಿಕೊಳ್ಳಬೇಕಿದ್ದರೆ, ಎಲ್ಲರಿಗೂ ಬೃಹತ್ ಮೊತ್ತ ನೀಡಲೇಬೇಕು. ಅದರಲ್ಲೂ 8 ಕೋಟಿ ರೂ. ಪಡೆಯುತ್ತಿರುವ ಸೂರ್ಯಕುಮಾರ್ ಯಾದವ್ ಹಾಗೂ 12 ಕೋಟಿ ರೂ. ಮಾತ್ರ ಪಡೆಯುತ್ತಿರುವ ಜಸ್ಪ್ರೀತ್ ಬುಮ್ರಾ ಬೃಹತ್ ಸಂಭಾವನೆಯನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಈ ಇಬ್ಬರನ್ನು ಹೇಗೆ ರಿಟೈನ್ ಮಾಡಿಕೊಳ್ಳುತ್ತಾರೆ ಎಂಬುದೇ ಈಗ ಕುತೂಹಲ.