- Kannada News Photo gallery Cricket photos IPL 2025 Yuvraj Singh Likely join Gujarat Titans as a head coach says reports
IPL 2025: ಐಪಿಎಲ್ ಕಂಬ್ಯಾಕ್ಗೆ ಯುವರಾಜ್ ಸಜ್ಜು; ಚಾಂಪಿಯನ್ ತಂಡ ಸೇರ್ತಾರಾ ಸಿಕ್ಸರ್ ಕಿಂಗ್?
IPL 2025: ಟೀಂ ಇಂಡಿಯಾಗೆ 2 ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇದೀಗ ಐಪಿಎಲ್‌ನಲ್ಲಿ ಕಮ್ ಬ್ಯಾಕ್ ಮಾಡಲು ಹೊರಟಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಯುವರಾಜ್ ಸಿಂಗ್ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಗಬಹುದು ಎಂದು ವರದಿಯಾಗಿದೆ.
Updated on:Jul 23, 2024 | 8:37 PM

ಟೀಂ ಇಂಡಿಯಾಗೆ 2 ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇದೀಗ ಐಪಿಎಲ್‌ನಲ್ಲಿ ಕಮ್ ಬ್ಯಾಕ್ ಮಾಡಲು ಹೊರಟಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಯುವರಾಜ್ ಸಿಂಗ್ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಗಬಹುದು ಎಂಬ ಊಹಾಪೋಹಾಗಳು ಸೃಷ್ಟಿಯಾಗಿವೆ.

ವರದಿ ಪ್ರಕಾರ, ಗುಜರಾತ್ ಟೈಟಾನ್ಸ್ ತಂಡದ ಹಾಲಿ ಕೋಚ್ ಆಗಿರುವ ಆಶಿಶ್ ನೆಹ್ರಾ ಮತ್ತು ನಿರ್ದೇಶಕ ವಿಕ್ರಮ್ ಸೋಲಂಕಿ, 2025 ರ ಐಪಿಎಲ್ನ ಮೆಗಾ ಹರಾಜಿಗೂ ಮೊದಲು ತಂಡವನ್ನು ತೊರೆಯಬಹುದು ಎನ್ನಲಾಗಿದೆ. ಹೀಗಾಗಿ ತೆರವಾದ ಸ್ಥಾನ ತುಂಬಲು, ಗುಜರಾತ್ ಟೈಟಾನ್ಸ್ ಮ್ಯಾನೇಜ್ ಮೆಂಟ್ ಯುವರಾಜ್ ಸಿಂಗ್ ಅವರನ್ನು ಸಂಪರ್ಕಿಸಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ, ಯುವರಾಜ್ ಸಿಂಗ್ ವಿಶ್ವದಾದ್ಯಂತ ನಿವೃತ್ತ ಆಟಗಾರರ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಈಗ ಅವರು ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ. ಇದಕ್ಕೆ ಪೂರಕವಾಗಿ ಯುವರಾಜ್ ಸಿಂಗ್ ಕೂಡ ಐಪಿಎಲ್‌ನಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ.

ಐಪಿಎಲ್‌ನಲ್ಲಿ 132 ಪಂದ್ಯಗಳನ್ನಾಡಿರುವ ಯುವರಾಜ್ 2750 ರನ್ ಗಳಿಸಿದ್ದಾರೆ. ಇದಲರಲ್ಲಿ 13 ಅರ್ಧಶತಕಗಳೂ ಸೇರಿವೆ. ಯುವರಾಜ್ ಪಂಜಾಬ್, ಹೈದರಾಬಾದ್, ಪುಣೆ ವಾರಿಯರ್ಸ್, ಆರ್‌ಸಿಬಿ, ಮುಂಬೈ ಇಂಡಿಯನ್ಸ್ ತಂಡಗಳಲ್ಲಿ ಆಡಿದ್ದಾರೆ.

ಒಂದು ವೇಳೆ ಯುವರಾಜ್ ಸಿಂಗ್ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆದರೆ ಅವರಿಗೆ ಭಾರಿ ಮೊತ್ತದ ಸಂಭಾವನೆ ಸಿಗುವ ಸಾಧ್ಯತೆಗಳಿವೆ. ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್ ಪ್ರತಿ ಸೀಸನ್ಗೆ ಹಾಲಿ ಕೋಚ್ ಆಶಿಶ್ ನೆಹ್ರಾಗೆ 3.5 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಇದೀಗ ಯುವರಾಜ್ ಈ ಸ್ಥಾನಕ್ಕೆ ಬಂದರೆ ಅವರ ವೇತನದ ಗಾತ್ರ ಹೆಚ್ಚುವುದು ಖಚಿತ.

ಯುವರಾಜ್ ಸಿಂಗ್ ಅಲ್ಲದೆ, ಇತ್ತೀಚೆಗಷ್ಟೇ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿರುವ ರಾಹುಲ್ ದ್ರಾವಿಡ್ ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಬಹುದು ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಇದೀಗ ಅವರ ಸ್ಥಾನಕ್ಕೆ ದ್ರಾವಿಡ್ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಅಲ್ಲದೆ ದ್ರಾವಿಡ್ ಈಗಾಗಲೇ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಕೂಡ ಸಲ್ಲಿಸಿದ್ದಾರೆ.
Published On - 8:33 pm, Tue, 23 July 24




