
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಕೆಲ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಹೀಗೆ ಮಾಡಲಾದ ಬದಲಾವಣೆಗಳಲ್ಲಿ ಅನ್ಕ್ಯಾಪ್ಡ್ ರೂಲ್ಸ್ ಕೂಡ ಒಂದು. ಅಂದರೆ ಈ ಹಿಂದೆಯಿದ್ದ ಅನ್ಕ್ಯಾಪ್ಡ್ ಆಟಗಾರರ ನಿಯಮಗಳಲ್ಲಿ ಈ ಬಾರಿ ಮಾರ್ಪಾಡು ಮಾಡಲಾಗಿದೆ.

ಈ ಹಿಂದೆ ರಾಷ್ಟ್ರೀಯ ತಂಡದ ಪರ ಆಡದ ಆಟಗಾರರನ್ನು ಮಾತ್ರ ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡು 5 ವರ್ಷ ಕಳೆದಿರುವ ಆಟಗಾರರನ್ನು ಸಹ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಗೆ ಪರಿಗಣಿಸಬಹುದು.

ಇಂತಹದೊಂದು ನಿಯಮವು 2008 ರಲ್ಲಿ ಜಾರಿಯಲ್ಲಿತ್ತು. ಆದರೆ ಆ ಸಂದರ್ಭಗಳಲ್ಲಿ ಈ ನಿಯಮ ಬಳಕೆ ಬರದಿದ್ದ ಕಾರಣ ಅದನ್ನು ತೆಗೆದು ಹಾಕಲಾಗಿತ್ತು. ಇದೀಗ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಕೋರಿಕೆಯ ಮೇರೆಗೆ ಈ ನಿಯಮವನ್ನು ಮತ್ತೆ ಜಾರಿಗೊಳಿಸಲಾಗಿದೆ.

ಮಹೇಂದ್ರ ಸಿಂಗ್ ಧೋನಿಯನ್ನು ಕಡಿಮೆ ಮೊತ್ತದಲ್ಲಿ ರಿಟೈನ್ ಮಾಡಿಕೊಳ್ಳಲು ಸಿಎಸ್ಕೆ ಫ್ರಾಂಚೈಸಿಯು ಈ ನಿಯಮವನ್ನು ಜಾರಿಗೊಳಿಸುವಂತೆ ಆಗ್ರಹಿಸಿದೆ. ಏಕೆಂದರೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿ 5 ವರ್ಷ ಕಳೆದಿದೆ. ಇದೀಗ ಅವರನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಗೆ ಪರಿಗಣಿಸಬಹುದು. ಈ ಮೂಲಕ ಕೇವಲ 4 ಕೋಟಿ ರೂ.ಗೆ ರಿಟೈನ್ ಮಾಡಿಕೊಳ್ಳಬಹುದು.

ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿಯನ್ನು 4 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡರೆ, ಸಿಎಸ್ಕೆ ಫ್ರಾಂಚೈಸಿಯು ಹೆಚ್ಚಿನ ಹರಾಜು ಮೊತ್ತವನ್ನು ಉಳಿಸಿಕೊಳ್ಳಬಹುದು. ಹೀಗಾಗಿಯೇ ಈ ಬಾರಿ ಧೋನಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗುವುದು ಖಚಿತ ಎನ್ನಲಾಗಿದೆ.

ಈ ಬಗ್ಗೆ ಚರ್ಚಿಸಲೆಂದೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮಾಲೀಕರು ಇದೇ ತಿಂಗಳು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಧೋನಿ ಕೂಡ ಭಾಗವಹಿಸಲಿದ್ದಾರೆ. ಈ ಮೀಟಿಂಗ್ ಬಳಿಕ ಸಿಎಸ್ಕೆ ತಂಡದ ರಿಟೈನ್ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ. ಅದರಂತೆ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿದುಕೊಂಡರೆ, ಕಳೆದ ಬಾರಿಗಿಂತ 8 ಕೋಟಿ ರೂ. ಕಡಿಮೆ ಪಡೆಯಲಿದ್ದಾರೆ. ಅಂದರೆ ಕೇವಲ 4 ಕೋಟಿ ರೂ. ಮಾತ್ರ.