MS Dhoni: ಧೋನಿಯನ್ನು ಬ್ಯಾನ್ ಮಾಡಬೇಕಿತ್ತು: ವೀರೇಂದ್ರ ಸೆಹ್ವಾಗ್
IPL 2025: ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಏಕೆಂದರೆ ಧೋನಿಯನ್ನು ರಿಟೈನ್ ಮಾಡಿಕೊಳ್ಳಲು ಸಿಎಸ್ಕೆ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳುವ ಸಾದ್ಯತೆಯಿದೆ.
1 / 6
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಐಪಿಎಲ್ನಿಂದಲೇ ಬ್ಯಾನ್ ಮಾಡಬೇಕಿತ್ತು. ಇದರಿಂದ ಬೇರೆಯವರು ಪಾಠ ಕಲಿಯುತ್ತಿದ್ದರು. ಇಂತಹ ಅಚ್ಚರಿಯ ಹೇಳಿಕೆ ನೀಡಿದ್ದು ಮತ್ಯಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್.
2 / 6
ಅಷ್ಟಕ್ಕೂ ಧೋನಿಯನ್ನು ಸೆಹ್ವಾಗ್ ಬ್ಯಾನ್ ಮಾಡಬೇಕಿತ್ತು ಅಂದಿರುವುದು 2019ರಲ್ಲಿ ನಡೆದ ಘಟನೆಗೆ. 2019ರ ಐಪಿಎಲ್ನಲ್ಲಿ ಸಿಎಸ್ಕೆ ತಂಡವನ್ನು ಮುನ್ನಡೆಸಿದ್ದ ಧೋನಿ ಮೈದಾನಕ್ಕೆ ನುಗ್ಗಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಕ್ರಿಕ್ಬಝ್ ಸಂದರ್ಶನದಲ್ಲಿ ಈ ಘಟನೆಯನ್ನು ಪ್ರಸ್ತಾಪಿಸಿ ಮಾತನಾಡಿರುವ ಸೆಹ್ವಾಗ್, ಅಂದು ಧೋನಿಯನ್ನು ಬ್ಯಾನ್ ಮಾಡಬೇಕಿತ್ತು ಅಂದಿದ್ದಾರೆ.
3 / 6
2019ರ ಐಪಿಎಲ್ ಪಂದ್ಯದಲ್ಲಿ ಸಿಎಸ್ಕೆ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಕೊನೆಯ ಓವರ್ನಲ್ಲಿ ಸಿಎಸ್ಕೆ ತಂಡಕ್ಕೆ 18 ರನ್ಗಳ ಅವಶ್ಯಕತೆಯಿತ್ತು. ಬೆನ್ ಸ್ಟೋಕ್ಸ್ ಎಸೆದ ಅಂತಿಮ ಓವರ್ನ ಮೊದಲ ಮೂರು ಎಸೆತಗಳಲ್ಲಿ 9 ರನ್ಗಳು ಮೂಡಿಬಂದಿದ್ದವು.
4 / 6
4ನೇ ಎಸೆತವು ಫುಲ್ ಟಾಸ್ ರೂಪದಲ್ಲಿ ಮೂಡಿಬಂತು. ಲೆಗ್ ಅಂಪೈರ್ ನೋ ಬಾಲ್ ನೀಡಿರಲಿಲ್ಲ. ಇದರಿಂದ ಕುಪಿತಗೊಂಡ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಮೈದಾನಕ್ಕೆ ಆಗಮಿಸಿ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಇದರಿಂದಾಗಿ ಕೆಲ ಹೊತ್ತು ಪಂದ್ಯ ಸ್ಥಗಿತಗೊಂಡಿತ್ತು. ಅಂದು ಮೈದಾನಕ್ಕೆ ಬಂದು ಅಂಪೈರ್ ಜೊತೆ ಮಾತಿನ ಚಕಮಕಿ ನಡೆಸಿದ ಧೋನಿಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿತ್ತು.
5 / 6
ಈ ಘಟನೆಯ ಬಗ್ಗೆ ಮಾತನಾಡಿದ ವೀರೇಂದ್ರ ಸೆಹ್ವಾಗ್, ಅಂದು ಧೋನಿಯ ನಡೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದರಿಂದ ಅವರು ಸುಲಭವಾಗಿ ಹೊರಬಂದರು. ನನ್ನ ಪ್ರಕಾರ ಧೋನಿಯನ್ನು ಎರಡು ಮೂರು ಪಂದ್ಯಗಳಿಂದ ಬ್ಯಾನ್ ಮಾಡಬೇಕಿತ್ತು. ಏಕೆಂದರೆ ಧೋನಿ ಮಾಡಿರುವುದನ್ನು, ನಾಳೆ ಇನ್ನೊಬ್ಬ ನಾಯಕ ಮಾಡಬಹುದು.
6 / 6
ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅಂಪೈರ್ಗಳ ಮಾಲ್ಯವೇನು? ಎಂದು ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ. ಹೀಗಾಗಿಯೇ ಮೈದಾನಕ್ಕೆ ನುಗ್ಗಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದ ಸಿಎಸ್ಕೆ ನಾಯಕನನ್ನು ಕೆಲ ಪಂದ್ಯಗಳಿಂದ ಅಮಾನತುಗೊಳಿಸಬೇಕಾಗಿತ್ತು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.