IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ LSG 171 ರನ್ ಕಲೆಹಾಕಿದರೆ, ಈ ಗುರಿಯನ್ನು ಪಂಜಾಬ್ ಕಿಂಗ್ಸ್ ಕೇವಲ 16.2 ಓವರ್ಗಳಲ್ಲಿ ಚೇಸ್ ಮಾಡಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನ ಬೆನ್ನಲ್ಲೇ LSG ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಈ ಹಿಂದಿನಂತೆ ನಾಯಕನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವಂತೆ..!
ಐಪಿಎಲ್ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಹೀನಾಯವಾಗಿ ಸೋಲನುಭವಿಸಿತ್ತು. ಈ ಸೋಲಿನ ಬಳಿಕ ಸಂಜೀವ್ ಗೊಯೆಂಕಾ ಎಲ್ಎಸ್ಜಿ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಅವರನ್ನು ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಕಾರಣದಿಂದಾಗಿ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿದ್ದರು. ಇದೀಗ ಅವರ ಸ್ಥಾನದಲ್ಲಿ ರಿಷಭ್ ಪಂತ್ ನಿಂತಿದ್ದಾರೆ.
ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುತ್ತಿದ್ದಂತೆ ಮೈದಾನಕ್ಕೆ ಆಗಮಿಸಿದ್ದ ಸಂಜೀವ್ ಗೊಯೆಂಕಾ ಅವರು ರಿಷಭ್ ಪಂತ್ ಅವರೊಂದಿಗೆ ಚರ್ಚಿಸುತ್ತಿರುವುದು ಕಂಡು ಬಂದಿದ್ದರು. ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಗೊಯೆಂಕಾ ನಾಯಕನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ.
ಆದರೆ ಈ ಬಾರಿ ರಿಷಭ್ ಪಂತ್ ಅವರೊಂದಿಗೆ ತುಸು ಗಂಭೀರವಾಗಿ ಚರ್ಚಿಸುವಂತೆ ಕಂಡು ಬಂದಿದ್ದು, ಅಲ್ಲರೆ ಬೆರಳು ತೋರಿಸುವ ಮೂಲಕ ಖಡಕ್ ಸೂಚನೆ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಂದರೆ ತವರು ಮೈದಾನದಲ್ಲಿ ಎಲ್ಎಸ್ಜಿ ತಂಡವು ಎರಡು ಪಂದ್ಯಗಳನ್ನು ಸೋತಿರುವುದನ್ನು ಸಂಜೀವ್ ಗೊಯೆಂಕಾ ಗಂಭೀರವಾಗಿ ಪರಿಗಣಿಸಿರುವ ಸಾಧ್ಯತೆಯಿದೆ.
ಸಂಜೀವ್ ಗೊಯೆಂಕಾ ಹಾಗೂ ರಿಷಭ್ ಪಂತ್ ಅವರ ನಡುವಣ ಈ ಬಿಸಿ ಚರ್ಚೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಕೆಎಲ್ ರಾಹುಲ್ಗೆ ಆದ ಪರಿಸ್ಥಿತಿಯೇ ಪಂತ್ಗೂ ಬಂದು ಎರಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಮುಂದಿನ ಪಂದ್ಯಗಳ ಫಲಿತಾಂಶಗಳಿಂದಲೇ ಸ್ಪಷ್ಟ ಉತ್ತರವಂತು ಸಿಗಲಿದೆ.